21,000 ಸಸಿ ನೆಡದಿದ್ದರೆ ಎತ್ತಿನಹೊಳೆ ಯೋಜನೆ ರದ್ದು : ಹಸಿರು ನ್ಯಾಯಮಂಡಳಿ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

NGT-05

ಚೆನ್ನೈ,ಜ.20-ಎತ್ತಿನಹೊಳೆ ಯೋಜನೆಗಾಗಿ ಕಡಿಯಲಾಗಿರುವ 7000 ಮರಗಳ ಬದಲಿಗೆ 21,000 ಸಸಿಗಳನ್ನು ನೆಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಯೋಜನೆಯನ್ನೇ ರದ್ದುಗೊಳಿಸುವುದಾಗಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‍ಜಿಟಿ) ಇಂದು ರಾಜ್ಯ ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಿದೆ.  ಎತ್ತಿನಹೊಳೆ ಯೋಜನೆಗಾಗಿ ಸಾವಿರಾರು ಮರಗಳನ್ನು ಕಡಿದು ಪರಿಸರಕ್ಕೆ ತೀವ್ರ ಧಕ್ಕೆ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮನವಿ ಕುರಿತು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ಪೀಠ ಪರಿಸರ ರಕ್ಷಣೆಗೆ ಕೈಗೊಂಡಿರುವ ಕ್ರಮಗಳೇನು? ಈ ಬಗ್ಗೆ ಸ್ಪಷ್ಟವಾದ ಉತ್ತರ ನೀಡಬೇಕೆಂದು ರಾಜ್ಯದ ಪರ ವಕೀಲರಿಗೆ ತಾಕೀತು ಮಾಡಿದರು. ರಾಜ್ಯದ ಪರ ವಕೀಲರು ಈ ಯೋಜನೆಗಾಗಿ 7000 ಮರಗಳನ್ನು ಕಡಿಯಲಾಗಿದೆ. ಅದರ ಬದಲಿಗೆ ಆ ಸ್ಥಳಗಳಲ್ಲಿ 3000 ಸಸಿಗಳನ್ನು ನೆಡಲಾಗಿದೆ ಎಂದು ನೀಡಿದ ಉತ್ತರದಿಂದ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪರಿಸರದ ಬಗ್ಗೆ ಸರ್ಕಾರ ಹೊಂದಿರುವ ಕಾಳಜಿ ಇದೇನಾ? ಮಾಧವ್ ಗಾಡ್ಗಿಲ್ ಮತ್ತು ಕಸ್ತೂರಿ ರಂಗನ್ ಅವರು ಪಶ್ಚಿಮ ಘಟ್ಟ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ ಪರಿಸರ ರಕ್ಷಣೆಗಾಗಿ ಸಲ್ಲಿಸಲಾಗಿರುವ ವರದಿಯನ್ನು ಏಕೆ ಪಾಲಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳು ಗರಂ ಆದರು.  ನಿಮ್ಮ ಯೋಜನೆಯಿಂದ(ಎತ್ತಿನಹೊಳೆ) ಪರಿಸರಕ್ಕೆ ತೀವ್ರ ಧಕ್ಕೆಯಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಿ. ಬದಲಿಗೆ ನೀವು ಪರಿಸರ ಸಂರಕ್ಷಣೆಗಾಗಿ ಕೈಗೊಳ್ಳುತ್ತಿರುವ ಕ್ರಮಗಳೇನು? ಮರಗಳನ್ನು ಕಡಿದು ಹಾಕುವುದರಿಂದ ಆಗುವ ಪರಿಣಾಮವೇನು? ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ವಕೀಲರಿಗೆ ನ್ಯಾಯಾಧೀಶರು ಆದೇಶಿಸಿದರು.  ಮರಗಳನ್ನು ಕತ್ತರಿಸುವುದರಿಂದ ಮಣ್ಣಿನ ಸವೆತ ಉಂಟಾಗುತ್ತದೆ. ಇದರ ಬಗ್ಗೆ ಯಾವ ಅಧ್ಯಯನ ನಡೆಸಿಲ್ಲ ಏಕೆ? ಎಂದು ಎನ್‍ಜಿಟಿ ಖಾರವಾಗಿ ಪ್ರಶ್ನಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin