ಅಸ್ಸಾಂನಲ್ಲಿ ಭೀಕರ ಪ್ರವಾಹಕ್ಕೆ 26 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹತಿ, ಜೂ.30-ಈಶಾನ್ಯ ರಾಜ್ಯ ಅಸ್ಸಾಂನ ವಿವಿಧೆಡೆ ಭಾರೀ ಮಳೆ ಮತ್ತು ಭೀಕರ ಪ್ರವಾಹದಿಂದ ಈವರೆಗೆ 26 ಮಂದಿ ಸಾವಿಗೀಡಾಗಿದ್ದು, ಕೆಲವರು ನಾಪತ್ತೆಯಾಗಿದ್ದಾರೆ. ಪ್ರಕೃತಿ ವಿಕೋಪದಿಂದಾಗಿ ಸುಮಾರು 25 ಜಿಲ್ಲೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, 13 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ.

ಮಳೆ ಮತ್ತು ಪ್ರವಾಹದಿಂದಾಗಿ ಭಾರೀ ಹಾನಿ ಸಂಭವಿಸಿದ್ದು, ಕೋಟ್ಯಂತರ ರೂ.ನಷ್ಟು ನಷ್ಟ ಉಂಟಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಬಾರ್‍ಪೆಟಾ, ದಿಬ್ರುಗಢ ಮತ್ತು ಗೋಲ್‍ಪಾರಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾವು ನೋವು ಸಂಭವಿಸಿದೆ. ಒಟ್ಟು 13,16,927 ಮಂದಿ ಪ್ರಕೃತಿ ವಿಕೋಪದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. 27,464 ಜನರಿಗೆ 274 ಶಿಬಿರಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.

ಭಾರೀ ಮಳೆ, ಮತ್ತು ಪ್ರವಾಹದಿಂದ ನೂರಾರು ಜಾನುವಾರುಗಳು ಮೃತಪಟ್ಟಿದ್ದು, 12 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ.  ಈಶಾನ್ಯ ಭಾರತದ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಲ್ಲಿ ಮುಂದಿನ 48 ತಾಸುಗಳಲ್ಲಿ ಮತ್ತೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Facebook Comments