23.50 ಲಕ್ಷ ರೈತರಿಗೆ ಅಲ್ಪಾವಧಿ ಕೃಷಿ ಸಾಲ

ಈ ಸುದ್ದಿಯನ್ನು ಶೇರ್ ಮಾಡಿ

KNR

ಬೆಂಗಳೂರು, ಸೆ.24-ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ರೈತರು ಅತ್ಯಂತ ಸಂಕಷ್ಟದಲ್ಲಿದ್ದು, ಅವರಿಗೆ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ರಾಜ್ಯ ಅಪೆಕ್ಸ್ ಬ್ಯಾಂಕ್ ರಾಜ್ಯದ 23.50 ಲಕ್ಷ ರೈತರಿಗೆ 3 ಲಕ್ಷ ಮಿತಿಗೊಳಪಡಿಸಿ ಶೂನ್ಯ ಬಡ್ಡಿದರದಲ್ಲಿ ಜಿಲ್ಲಾ ಬ್ಯಾಂಕುಗಳ ಮೂಲಕ 11 ಸಾವಿರ ಕೋಟಿ ಅಲ್ಪಾವಧಿ ಸಾಲ ನೀಡುವ ಗುರಿ ಹೊಂದಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.  ನಗರದ ಚಾಮರಾಜಪೇಟೆಯಲ್ಲಿರುವ ರಾಜ್ಯ ಅಪೆಕ್ಸ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಿದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ತನ್ನ 42 ಶಾಖೆಗಳ ಮೂಲಕ 800 ಕೋಟಿ ಕೃಷಿಯೇತರ ಸಾಲ ನೀಡುವ ಗುರಿ ಸೇರಿದಂತೆ ಒಟ್ಟು 19,500 ಕೋಟಿ ಸಾಲ ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದ ಅವರು, ಅಪೆಕ್ಸ್ ಬ್ಯಾಂಕ್ ಕೃಷಿಕರ ಹಾಗೂ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿ ನಿಲ್ಲಲಿದೆ ಎಂದು ಹೇಳಿದರು.

ಅಪೆಕ್ಸ್ ಬ್ಯಾಂಕ್ ನೂರು ವರ್ಷಗಳ ಯಶಸ್ವಿ ಸೇವೆಯನ್ನು ಪೂರ್ಣಗೊಳಿಸಿದ್ದು, 7201 ಕೋಟಿ ಠೇವಣಿ ಸಂಗ್ರಹಣೆಯ ಜೊತೆಗೆ 14406 ಕೋಟಿ ದುಡಿಯುವ ಬಂಡವಾಳ ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕಿನ ಸ್ವಂತ ನಿಧಿಯನ್ನು 924 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ಠೇವಣೆ ಸಂಗ್ರಹಣೆಯನ್ನು 8200 ಕೋಟಿಗಳಿಗೆ ಹಾಗೂ ದುಡಿಯುವ ಬಂಡವಾಳವನ್ನು 15700 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಮೂಲಕ 40 ಕೋಟಿ ನಿವ್ವಳ ಲಾಭ ಗಳಿಸುವತ್ತ ದಾಪುಗಾಲಿಡಲಿದೆ ಎಂದು ತಿಳಿಸಿದರು. ಬ್ಯಾಂಕಿನ ಯಶಸ್ವಿ ಚಟುವಟಿಕೆ ಹಾಗೂ ರೈತ ಸಮುದಾಯಕ್ಕೆ ನೀಡುತ್ತಿರುವ ಸಾಲ ಸಹಕಾರಗಳನ್ನು ಗುರುತಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಪೆಕ್ಸ್ ಬ್ಯಾಂಕ್ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ಇನ್ನಷ್ಟು ಆರ್ಥಿಕ ಶಕ್ತಿ ತುಂಬಲು ವಿವಿಧ ಇಲಾಖೆಗಳ ಮೂಲಕ 5000 ಕೋಟಿ ಠೇವಣಿ ಕಲ್ಪಿಸಿಕೊಡುವ ಭರವಸೆ ನೀಡಿರುವುದು ಅಭಿನಂದನಾರ್ಹ ಎಂದರು.
ಇದಲ್ಲದೆ ರಾಜ್ಯದ ರೈತರ ಹಿತವನ್ನು ಪ್ರಥಮ ಆದ್ಯತೆಯಾಗಿಟ್ಟುಕೊಂಡು ತನ್ನ ಸ್ವಂತ ಸಂಪನ್ಮೂಲಗಳಿಂದ ಜಿಲ್ಲಾ ಬ್ಯಾಂಕುಗಳಿಗೆ ಶೇ.5.20 ರ ರಿಯಾಯಿತಿ ಬಡ್ಡಿದರದರಲ್ಲಿ 72 ಕೋಟಿ ಅಲ್ಪಾವಧಿ ಸಾಲ ನೀಡಿದೆ ಎಂದು ತಿಳಿಸಿದರು.

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಚಂದ್ರಶೇಖರಯ್ಯ, ವ್ಯವಸ್ಥಾಪಕ ನಿರ್ದೇಶಕ ರಮಣರೆಡ್ಡಿ, ಕಾರ್ಯದರ್ಶಿ, ಸಿ.ಎನ್.ದೇವರಾಜ್, ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಜಂಗಮಪ್ಪ, ಪಿ.ಎಲ್.ಕೃಷ್ಣ ಸೇರಿದಂತೆ ಬ್ಯಾಂಕಿನ ನಿರ್ದೇಶಕರು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin