24 ಗಂಟೆಗಳಾದರೂ ಪತ್ತೆಯಾಗದ ದೇಹಗಳು : ಕಾರ್ಯಾಚರಣೆಗೆ ಕೆಸರು, ಬಲೆ ಅಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Mastigudi-z

ಬೆಂಗಳೂರು, ನ.8- ದುನಿಯಾ ವಿಜಿ ನಟನೆಯ ಮಾಸ್ತಿಗುಡಿ ಚಿತ್ರದ ರೋಚಕ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ನಿನ್ನೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ದುರಂತ ಅಂತ್ಯ ಕಂಡಿದ್ದ ಇಬ್ಬರು ನಟರ ಮೃತ ದೇಹಗಳ ಪತ್ತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ನಿನ್ನೆ ರಾತ್ರಿ 12 ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಸ್ಥಗಿತಗೊಳಿಸಲಾಯಿತು. ಇಂದು ಮುಂಜಾನೆಯಿಂದಲೇ ಮತ್ತೆ ಶೋಧಕಾರ್ಯ ಮುಂದುವರಿದಿದೆ. ಎನ್‍ಡಿಆರ್‍ಎಫ್ ತಂಡದ ಸಿಬ್ಬಂದಿ, ನುರಿತ ಈಜುಗಾರರು, ಅಗ್ನಿಶಾಮಕ ದಳದವರು, ಸ್ಥಳೀಯ ಮೀನುಗಾರರು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮೃತದೇಹಗಳ ಪತ್ತೆಗೆ ಶೋಧಕಾರ್ಯ ಮುಂದುವರಿಸಿದ್ದಾರೆ.

ಎನ್‍ಡಿಆರ್‍ಎಫ್‍ನ ನಾಲ್ಕು ಬೋಟ್‍ಗಳು, ಸ್ಥಳೀಯ ಮೀನುಗಾರರ ನಾಲ್ಕು ತೆಪ್ಪಗಳು ಹಾಗೂ ಅಗ್ನಿಶಾಮಕ ದಳದ ಒಂದು ಬೋಟ್‍ನಲ್ಲಿ ನಿನ್ನೆ ಮೃತ ನಟರಾದ ಅನಿಲ್ ಹಾಗೂ ಉದಯ್ ಅವರ ಶವಗಳ ಪತ್ತೆಗೆ ಹುಡುಕಾಟ ನಡೆದಿದೆ. ನಿನ್ನೆ ನಟರು ನೀರಿಗೆ ಜಿಗಿದ ಸ್ಥಳದ ಸುತ್ತಮುತ್ತ ಶವಗಳಿಗಾಗಿ ತೀವ್ರ ತಲಾಶ್ ನಡೆಸುತ್ತಿದ್ದಾರೆ.  ಎನ್‍ಡಿಆರ್‍ಎಫ್ ಇನ್ಸ್‍ಪೆಕ್ಟರ್ ಕೇಶವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅವಘಡದಲ್ಲಿ ಪಾರಾಗಿದ್ದ ಮಾಸ್ತಿಗುಡಿ ಚಿತ್ರದ ನಾಯಕ ನಟ ದುನಿಯಾ ವಿಜಿ ಅವರು ಎನ್‍ಡಿಆರ್‍ಎಫ್ ತಂಡದೊಂದಿಗಿದ್ದಾರೆ. ನೀರು ಕಲುಷಿತಗೊಂಡು ಕೆಸರು ತುಂಬಿರುವುದರಿಂದ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಯಾಗಿದೆ ಎಂದು ತಿಳಿದುಬಂದಿದ್ದು, ಮಧ್ಯಾಹ್ನವಾದರೂ ಶವಗಳಿರುವ ಬಗ್ಗೆ ಕುರುಹುಗಳು ಪತ್ತೆಯಾಗಿಲ್ಲ.
ಸ್ಥಳೀಯ ಮೀನುಗಾರರು ಮುಳ್ಳುತಂತಿ ಬಳಸಿ ತಮ್ಮದೇ ಶೈಲಿಯಲ್ಲಿ ಶವಗಳ ಹುಡುಕಾಟ ನಡೆಸಿದರೆ, ಎನ್‍ಡಿಆರ್‍ಎಫ್ ತಂಡದವರು ಮುಳುಗುತಜ್ಞರೊಂದಿಗೆ ಶವಗಳ ಹುಡುಕಾಟ ಮುಂದುವರಿಸಿದ್ದಾರೆ.

ಕೆರೆಯಲ್ಲಿ 40 ಅಡಿ ನೀರಿದ್ದು, ಅದರಲ್ಲಿ 8 ಅಡಿ ಆಳದ ಕೆಸರು ತುಂಬಿಕೊಂಡಿದೆ. ಹೀಗಾಗಿ ಮುಳುಗು ತಜ್ಞರು ಮೃತ ದೇಹವಿರುವ ಜಾಗಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ನೀರು ಕೂಡ ಕೆಸರಿನಿಂದ ಕೂಡಿರುವುದರಿಂದ ನೀರಿನೊಳಗೆ ಏನೂ ಕಾಣದಂತಾಗಿದೆ. ಹೀಗಾಗಿ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಯಾಗಿದೆ. ಪ್ರತಿ ಬೋಟ್‍ನಲ್ಲೂ 5 ರಿಂದ 6 ಜನರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.

ಮುಗಿಲು ಮುಟ್ಟಿದ ಆಕ್ರಂದನ:

ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ನಟ ಅನಿಲ್ ಹಾಗೂ ಉದಯ್ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳಕ್ಕೆ ಸುತ್ತಮುತ್ತಲ ಗ್ರಾಮಗಳ ಜನ ಜಮಾಯಿಸಿದ್ದರು. ಬೆಳಗ್ಗೆಯಿಂದ ಚಿತ್ರನಟರು, ನಿರ್ದೇಶಕರು, ನಿರ್ಮಾಪಕರು, ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಆಗಮಿಸಿದ್ದರು.  ಹಿರಿಯ ನಟ ಶಿವರಾಜ್‍ಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಪ್ರೇಮ್, ರಂಗಾಯಣ ರಘು, ಜಗ್ಗೇಶ್, ಥ್ರಿಲ್ಲರ್ ಮಂಜು, ಯೋಗರಾಜ್ ಭಟ್, ಬುಲೆಟ್ ಪ್ರಕಾಶ್, ಯಶ್, ಧೃವ ಸರ್ಜ ಸೇರಿದಂತೆ ಅನೇಕರು ಆಗಮಿಸಿ ತಮ್ಮ ಆತಂಕ ವ್ಯಕ್ತಪಡಿಸಿದರು.  ಅನಿಲ್ ಹಾಗೂ ಉದಯ್ ಕುಟುಂಬದವರು ಜಲಾಶಯದ ದಡದಲ್ಲಿ ಗೋಳಿಡುತ್ತಿದ್ದ ದೃಶ್ಯ ಎಂಥವರ ಕರುಳನ್ನೂ ಹಿಂಡುತ್ತಿತ್ತು.

ಚಿತ್ರತಂಡ ವಿರುದ್ಧ ದೂರು ದಾಖಲು:

ಇನ್ನು ನಿಯಮಗಳನ್ನು ಉಲ್ಲಂಘಿಸಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಬೇಜವಾಬ್ದಾರಿತನದಿಂದ ಚಿತ್ರೀಕರಣ ನಡೆಸಿದ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದೆ.
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಮಾಸ್ತಿಗುಡಿ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದ್ದು, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮ, ನಿರ್ಮಾಪಕ ಸುಂದರ್, ಚಿತ್ರತಂಡದ ಯುನಿಟ್ ಮ್ಯಾನೇಜರ್ ಭರತ್ ವಿರುದ್ಧ ಸೆಕ್ಷನ್-304, 188 ಕಲಂ 34ರಡಿ ಪ್ರಕರಣ ದಾಖಲಿಸಲಾಗಿದೆ. ಮಾಸ್ತಿಗುಡಿ ಚಿತ್ರತಂಡ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದೂ ಅಲ್ಲದೆ ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ ಮಾಡುವಂತಿಲ್ಲ ಎಂಬ ನಿಯಮಗಳಿದ್ದರೂ ಅವುಗಳನ್ನು ಉಲ್ಲಂಘಿಸಿ ಚಿತ್ರೀಕರಣ ನಡೆಸಿದ್ದಾರೆ. ಖಳನಟರು ಹೆಲಿಕಾಪ್ಟರ್‍ನಿಂದ ನೀರಿಗೆ ಜಿಗಿಯುವ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೆಕ್ಷನ್-304ರ ಆರೋಪ ಸಾಬೀತಾದರೆ 10 ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ತಿಪ್ಪಗೊಂಡನಹಳ್ಳಿ ಜಲಾಶಯದ ಅಧೀಕ್ಷಕರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

mastigudi-live-1

boar

M 3

 

M 5

 

Yash-02

M 02

Mastigudi

 

Mastigudi-climax

M 02

ಇದನ್ನೂ ಓದಿ : ಮಾಸ್ತಿಗುಡಿ ದುರಂತ ಚಿತ್ರರಂಗಕ್ಕೆ ಎಚ್ಚರಿಕೆ ಗಂಟೆ ಎಂದ ಶಿವರಾಜ್‍ಕುಮಾರ್)

Mastigudi-01
Mastigudi-11

Risk-02

Mastigudi-04

ಇದನ್ನೂ ಓದಿ : ಮಾಸ್ತಿಗುಡಿ ಘೋರ ದುರಂತಕ್ಕೆ ಯಾರು ಹೊಣೆ..? : ನಿರ್ಲಕ್ಷಕ್ಕೆ ಸಾಕ್ಷಿಯಾಯಿತೇ ಕ್ಲೈಮ್ಯಾಕ್ಸ್..! )

Mastigudi-03

 

Mastigudi-09

ಸಾ.ರಾ.ಗೋವಿಂದು ದಿಗ್ಭ್ರಮೆ

ಬೆಂಗಳೂರು, ನ.8– ಇಬ್ಬರು ನಟರ ಸಾವಿನಲ್ಲಿ ಅಂತ್ಯಗೊಂಡ ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ದುರಂತದ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅನಿಲ್ ಮತ್ತು ಉದಯ್ ಚಿತ್ರೀಕರಣ ವೇಳೆ ಮೃತಪಟ್ಟಿರುವುದಕ್ಕೆ ಸಂತಾಪ ಸೂಚಿಸಿರುವ ಅವರು, ಸಾಹಸ ದೃಶ್ಯಗಳ ಚಿತ್ರೀಕರಣ ವೇಳೆ ಸಿನಿಮಾ ತಂಡಗಳು ಜಾಗ್ರತೆ ವಹಿಸಬೇಕು. ಈ ತಂಡವು ಕೂಡ ಸಾಕಷ್ಟು ಜಾಗ್ರತೆ ವಹಿಸಿದೆ. ಆದರೂ ದುರಂತ ಸಂಭವಿಸಿದೆ. ಇನ್ನಷ್ಟು ಜಾಗ್ರತೆ ವಹಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.  ಮೃತರ ಕುಟುಂಬಕ್ಕೆ ವಾಣಿಜ್ಯ ಮಂಡಳಿಯಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.

Facebook Comments

Sri Raghav

Admin