25 ವರ್ಷದ ಆ ಆಗಂತುಕನೇ ಗೌರಿ ಹಂತಕ..!?

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-Shot-Dead

ಬೆಂಗಳೂರು, ಸೆ.6-ಜಾಕೆಟ್ ಧರಿಸಿ, ತಲೆಗೆ ಹೆಲ್ಮೆಟ್ ಹಾಕಿಕೊಂಡು, ಕೈಯಲ್ಲಿ ಪಿಸ್ತೂಲ್ ಹಿಡಿದು ಮಬ್ಬುಗತ್ತಲಲ್ಲಿ ನಿಂತಿದ್ದ ಆ 25 ವರ್ಷದ ಆಗಂತುಕನೇ ಗೌರಿ ಹಂತಕ..! ಹೌದು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬೆನ್ನತ್ತಿರುವ ಪೊಲೀಸರಿಗೆ ಲಭಿಸಿರುವ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಹಂತಕನ ಅಸ್ಪಷ್ಟ ಆಕೃತಿ ಸುಳಿವು ಪತ್ತೆಯಾಗಿದೆ. ಗೌರಿಲಂಕೇಶ್ ನಿವಾಸ ಸಮೀಪದಲ್ಲಿ ವಶಪಡಿಸಿಕೊಂಡಿರುವ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಮಬ್ಬುಗತ್ತಲಲ್ಲಿ ನಿಂತಿದ್ದ ಹದಿಹರೆಯದ ಯುವಕ ಗೌರಿ ಅವರಿಗೆ ಗುಂಡಿಟ್ಟು ಪರಾರಿಯಾಗುತ್ತಿರುವ ದೃಶ್ಯಾವಳಿ ಪೊಲೀಸರಿಗೆ ಲಭ್ಯವಾಗಿದೆ.

ಮೂಲಗಳ ಪ್ರಕಾರ ಗಾಂಧಿ ಬಜಾರ್‍ನಿಂದ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ ಹಂತಕರು ಗೌರಿ ಕಾರು ಇಳಿದು ಮನೆಯ ಆವರಣ ಪ್ರವೇಶಿಸುವ ಸಂದರ್ಭದಲ್ಲಿ ಗುಂಡಿಟ್ಟು ಹತ್ಯೆ ಮಾಡಲು ತೀರ್ಮಾನಿಸಿದ್ದರು ಎನ್ನಲಾಗಿದೆ. ಹೀಗಾಗಿ ಗೌರಿ ಮನೆ ಹತ್ತಿರ ಬರುವ ಮುನ್ನವೇ ಆಗಂತುಕ ಹಂತಕ ಗೌರಿ ಮನೆ ಸಮೀಪದ ಮಬ್ಬುಗತ್ತಲಿನಲ್ಲಿ ಹೊಂಚು ಹಾಕಿ ಕುಳಿತಿದ್ದ. ಜಾಕೆಟ್ ಧರಿಸಿರುವ ಹಂತಕ, ಹೆಲ್ಮೆಟ್ ಧರಿಸಿ, ಕೈಯಲ್ಲಿ ಪಿಸ್ತೂಲು ಹಿಡಿದು ನಿಂತಿದ್ದ. ಕಾರಿನಿಂದ ಇಳಿದ ಗೌರಿಲಂಕೇಶ್, ತಮ್ಮ ಮನೆ ಕಾಂಪೌಂಡ್ ಪ್ರವೇಶಿಸುತ್ತಿದ್ದಂತೆ ಮನೆಯ ಹಿಂಬದಿಯ ಮಬ್ಬುಗತ್ತಲಿನಿಂದ ಹೊರಬಂದ ಆಕೃತಿ ಏಕಾಏಕಿ ಗೌರಿ ಅವರ ಮೇಲೆ ಆರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದೆ.

ಆಗಂತುಕನ ಎರಡು ಗುಂಡು ಮನೆಯ ಗೋಡೆಗೆ ತಾಕಿದ್ದರೆ ಒಂದು ಗುಂಡು ನೆಲಕ್ಕಪ್ಪಳಿಸಿದ್ದು, ಮೂರು ಗುಂಡುಗಳು ಗೌರಿ ಅವರ ದೇಹ ಹೊಕ್ಕಿದೆ.
ಮೂರು ಗುಂಡು ಗೌರಿ ಅವರ ದೇಹ ಹೊಕ್ಕಿದೆ ಎಂಬುದು ಖಚಿತವಾಗುತ್ತಿದ್ದಂತೆ ಆಕೃತಿ ಕತ್ತಲಿನಲ್ಲಿ ಮಾಯವಾಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಹಂತಕನ ಜೊತೆಗೆ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವಿದ್ರೋಹಿಗಳ ಕೈವಾಡ:

ಹಂತಕನ ಕೃತ್ಯದಿಂದ ಆತ ವೃತ್ತಿಪರ ಕೊಲೆಗಾರ ಎನ್ನುವುದಂತೂ ಪೊಲೀಸರಿಗೆ ಸ್ಪಷ್ಟವಾಗಿದೆ. ಈ ರೀತಿಯ ಭಯಂಕರ ಹತ್ಯೆಗಳನ್ನು ಭಯೋತ್ಪಾದಕರು, ಕಟ್ಟಾ ಮೂಲಭೂತವಾದಿಗಳು ಹಾಗೂ ಮಾವೋವಾದಿಗಳು ಮಾತ್ರ ನಡೆಸುವುದು. ಹೀಗಾಗಿ ಗೌರಿ ಹತ್ಯೆ ಹಿಂದೆ ಈ ಮೂರು ಸಂಘಟನೆಗಳ ಕೈವಾಡವಿರುವ ಬಗ್ಗೆ ಗುಮಾನಿ ವ್ಯಕ್ತವಾಗಿದೆ.

ರಾಜ್ಯದಲ್ಲಿ ಭಯೋತ್ಪಾದಕರ ಹಾವಳಿ ಇಲ್ಲ. ಹೀಗಾಗಿ ವಿಚಾರವಾದಿ ಗೌರಿಲಂಕೇಶ್ ಅವರು ಕಡುವಿರೋಧ ಕಟ್ಟಿಕೊಂಡಿದ್ದ ಮೂಲಭೂತವಾದಿಗಳು, ಇಲ್ಲವೇ ಕೆಂಪುಉಗ್ರರು ಈ ಹತ್ಯೆ ನಡೆಸಿರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.  ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿರುವ ತನಿಖಾ ತಂಡಕ್ಕೆ ಹಂತಕನ ಸುಳಿವು ಪತ್ತೆಯಾಗಿದ್ದು, ಶೀಘ್ರದಲ್ಲೇ ಗೌರಿ ಹತ್ಯಾವ್ಯೂಹ ಭೇದಿಸುವ ವಿಶ್ವಾಸ ವ್ಯಕ್ತಪಡಿಸಿವೆ ಪೊಲೀಸ್ ಮೂಲಗಳು.

Facebook Comments

Sri Raghav

Admin