26/11ರ ಮುಂಬೈ ಉಗ್ರರ ದಾಳಿಗೆ 11 ವರ್ಷ, ಹುತಾತ್ಮರಿಗೆ ದೇಶದ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.26- ರಾಷ್ಟ್ರದ ವಾಣಿಜ್ಯ ರಾಜಧಾನಿಯ ಸಪ್ತತಾರಾ ತಾಜ್ ಹೋಟೆಲ, ಸಿಎಸ್‍ಟಿ ರೈಲು ನಿಲ್ದಾಣ, ಭಾಬಾದ್ ಹೌಸ್ ಮತ್ತಿತರೆಡೆ ಗುಂಡಿನ ದಾಳಿ ನಡೆಸಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಬಲಿ ಬಲಿಪಡೆದ 26/11ರ ಮುಂಬೈ ಭಯೋತ್ಪಾದಕರ ದಾಳಿಯ ಕರಾಳ ನೆನಪಿಗೆ ಇಂದು 11 ವರ್ಷ.

ಭಯೋತ್ಪಾದಕರ ವಿರುದ್ದ ಹೋರಾಟದಲ್ಲಿ ಹುತಾತ್ಮರಾದ ಯೋಧರಿಗೆ ದೇಶದ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು , ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ , ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ತಾಯ್ನಾಡಿನ ರಕ್ಷಣೆಗಾಗಿ ಭದ್ರತಾ ಪಡೆಗಳ ತ್ಯಾಗವನ್ನು ನಾವು ಸದಾ ಸ್ಮರಿಸುತ್ತೇವೆ. ಹುತಾತ್ಮರ ಕುಟುಂಬಗಳಿಗೆ ನಾವು ನೈತಿಕ ಬೆಂಬಲ ನೀಡುತ್ತೇವೆ ಎಂದು ಗಣ್ಯರು ಹೇಳಿದ್ದಾರೆ. ದಕ್ಷಿಣ ಮುಂಬೈ ಪೊಲೀಸ್ ಜಿಮ್ಖಾನಾದಲ್ಲಿ 26/11 ಪೊಲೀಸ್ ಸ್ಮಾರಕಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ , ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಅನೇಕ ಗಣ್ಯರು ಹುತಾತ್ಮರ ಗೌರವಾರ್ಥ ಪುಷ್ಪ ನಮನ ಸಲ್ಲಿಸಿದರು.

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾಲಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸುಭೋದ್ ಕುಮಾರ್ , ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಬಾರ್ವೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅಜಯ್ ಮೆಹ್ತಾ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ನವೆಂಬರ್ 2008ರ ದಾಳಿಯಲ್ಲಿ ಹುತಾತ್ಮರಾದ ಪೊಲೀಸರ ಕುಟುಂಬದವರೂ ಪಾಲ್ಗೊಂಡಿದ್ದರು.

ಸಮುದ್ರ ಮಾರ್ಗವಾಗಿ ಬಂದ ಪಾಕಿಸ್ತಾನದ ಲಷ್ಕರ್-ಎ-ತೋಯ್ಬಾ ಉಗ್ರಗಾಮಿ ಸಂಘಟನೆಯ 10 ಉಗ್ರರು ಇಂಡಿಯಾ ಗೇಟ್ ಮೂಲಕ ಭಾರತ ಪ್ರವೇಶಿಸಿದ್ದರು. ನಂತರ ತಾಜ್ ಹೋಟೆಲ್‍ನಲ್ಲಿ ಅವಿತು ನ.26 ರಿಂದ ನ.29ರವರೆಗೂ ನಿರಂತರ ದಾಳಿ ನಡೆಸಿದ್ದರು.  ಛತ್ರಪತಿ ಶಿವಾಜಿ ಟರ್ಮಿನಸ್, ಓಬೇರಾಯ್ ಟ್ರಿಡೆಂಟ್, ತಾಜ್ ಮಹಲ್ ಅಂಡ್ ಟವರ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ಜೆವಿಶ್ ಕಮ್ಯೂನಿಟಿ ಸೆಂರ್ಟ ಭಯೋತ್ಪಾದಕರ ದಾಳಿಗೆ ತುತ್ತಾಗಿತ್ತು.

18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಭಯೋತ್ಪಾದಕರು ಬಲಿ ಪಡೆದಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿತ್ತು. ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಮುಖ್ಯಸ್ಥೆ ಹೇಮಂತ್ ಕರ್ಕರೆ, ಸೇನೆಯ ಮೇಜರ್ ಬೆಂಗಳೂರು ಮೂಲದ ಸಂದೀಪ್ ಉನ್ನಿ ಕೃಷ್ಣನ್, ಮುಖ್ಯ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ ಮತ್ತು ಹಿರಿಯ ಪೊಲೀಸ್ ಇನ್‍ಸ್ಪೆಕ್ಟರ್ ವಿಜಯ್ ಸಾಲಸ್ಕರ್ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದವರಲ್ಲಿ ಪ್ರಮುಖರಾಗಿದ್ದಾರೆ.

ಈ ವೇಳೆ ದಾಳಿಯ ರೂವಾರಿ ಮಹಮದ್ ಅಜ್ಮಲ್ ಕಸಬ್‍ನನ್ನು ಜೀವಂತವಾಗಿ ಸೆರೆ ಸಿಕ್ಕಿದ್ದ. ಉಳಿದ 9 ಉಗ್ರರು ಹೊಟೇಲ್‍ನಲ್ಲೇ ಹತರಾಗಿದ್ದರು. ಬಳಿಕ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಕಸಬ್‍ನನ್ನು 2012ರಲ್ಲಿ ಗಲ್ಲಿಗೇರಿಸಲಾಯಿತು.

Facebook Comments