BIG NEWS : ಬೆಂಗಳೂರು ಪೊಲೀಸರ ಭರ್ಜರಿ ಬೇಟೆ, 28 ಡ್ರಗ್ ಪೆಡ್ಲರ್‌ಗಳ ಸೆರೆ, 1.57 ಕೋಟಿ ಮೌಲ್ಯದ ಮಾಲು ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.7- ಚಿತ್ರರಂಗದಲ್ಲಿನ ಮಾದಕ ವ್ಯಸನದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಸದ್ದಿಲ್ಲದೆ ಭರ್ಜರಿ ಬೇಟೆಯಾಡಿರುವ ಬೆಂಗಳೂರು ನಗರದ ಪೊಲೀಸರು, 8 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 28 ಮಂದಿಯನ್ನು ಬಂಧಿಸಿ 1.57 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಪೂರ್ವ ವಿಭಾಗದ ಪೊಲೀಸರು 11 ಮಂದಿ ಆರೋಪಿಯನ್ನು ಬಂಧಿಸಿ 90 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆಗ್ನೇಯ ವಿಭಾಗದ ಪೊಲೀಸರು 17 ಮಂದಿ ಆರೋಪಿಗಳನ್ನು ಬಂಧಿಸಿ 67 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಮಾದಕ ವಸ್ತುಗಳ ಒಟ್ಟು ತೂಕ 250 ಕೆಜಿಯಷ್ಟಿದೆ.

ಪೂರ್ವವಿಭಾಗದ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಹೈಟೆಕ್ ಡ್ರಗ್ಸ್ ಪೆಡ್ಲರ್‍ಗಳನ್ನು ಬಂಧಿಸಿ ಎಂಡಿಎಂಎ ಟ್ಯಾಬ್ಲೆಟ್‍ಗಳು, ಕ್ರಿಸ್ಟೆಲ್‍ಗಳು, ಬ್ರೌನ್‍ಶುಗರ್, ವಿಡ್ ಆಯಿಲ್‍ನನ್ನು ವಶಪಡಿಸಿಕೊಂಡಿದ್ದಾರೆ. ಬಾಣಸವಾಡಿ, ರಾಮಮೂರ್ತಿನಗರ, ಡಿ.ಜೆ.ಹಳ್ಳಿ ಠಾಣೆಗಳಲ್ಲಿ ಗಾಂಜಾ ಮಾರಾಟಗಾರರನ್ನು ಬಂಧಿಸಿ 48 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಈ ಆರೋಪಿಗಳಲ್ಲಿ ಕೆಲವರು ಖುದ್ದು ತಾವೇ ಮಾದಕ ವ್ಯಸನಿಗಳಾಗಿದ್ದು, ಸುಲಭವಾಗಿ ಹಣ ಸಂಪಾದಿಸಲು ಡ್ರಗ್ ಪೆಡ್ಲರ್‍ಗಳಾಗಿ ಬದಲಾಗಿದ್ದಾರೆ.

ಶಾಲಾ-ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು ಎಂಬ ಆತಂಕಕಾರಿ ಅಂಶಗಳು ತನಿಖೆಯಲ್ಲಿ ಪತ್ತೆಯಾಗಿದೆ. ಹಲಸೂರು ಪೆÇಲೀಸ್ ಠಾಣೆ: ಬಿಸಿಎ ಪದವೀಧರನಾದ ಕೇವಲ್ ಎಂ.ಲೋಹಿತ್ ಎಂಬ ಆರೋಪಿ ಬೆಂಗಳೂರು, ಗೋವಾಗಳಲ್ಲಿನ ರೇವ್ ಪಾರ್ಟಿಗಳಲ್ಲಿ ಭಾಗವಹಿಸಿ ಮಾದಕ ವ್ಯಸನಿಯಾಗಿದ್ದ. ನೈಜೀರಿಯಾ, ಆಫ್ರಿಕಾ ಡ್ರಗ್ ಪೆಡ್ಲರ್‍ಗಳ ಸಂಪರ್ಕ ಹೊಂದಿದ್ದ. ತನ್ನ ದುಶ್ಚಟಕ್ಕೆ ಹಣ ಹೊಂದಿಸಲು ತಾನೇ ಪೆಡ್ಲರ್ ಆಗಿ ಬದಲಾದ.

ಆಫ್ರಿಕಾ ಮತ್ತು ನೈಜೀರಿಯಾ ಪ್ರಜೆಗಳೊಂದಿಗಿನ ಸಂಪರ್ಕದಿಂದ ಆನ್‍ಲೈನ್ ಮುಖಾಂತರ ಮಾದಕ ವಸ್ತುಗಳನ್ನು ತರಿಸುತ್ತಿದ್ದ. ಡಾರ್ಕ್ ವೆಬ್ ಮತ್ತು ಬಿಟ್‍ಕಾಯಿನ್ ಬಳಸಿ ವ್ಯವಹಾರ ಮಾಡುತ್ತಿದ್ದ. ಮತ್ತೊಬ್ಬ ಬಂಧಿತ ಆರೋಪಿ ಮೊಹಮ್ಮದ್ ಹಿಪ್ಜುಲ್ಲಾ ಅಲಿಯಾಸ್ ಎಂಡಿ ಎಂಬಾತ ಬಿಕಾಂ ಪದವೀಧರನಾಗಿದ್ದು, ತಾನು ದುಶ್ಚಟಕ್ಕೆ ಬಲಿಯಾಗಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿ ಹೆಚ್ಚಿನ ಹಣ ಸಂಪಾದನೆಗಾಗಿ ಪೆಡ್ಲರ್ ಆಗಿ ಬದಲಾದ.

ವೈಭವ್ ಅಲಿ ಮಾಲೀಕತ್ವದ ಮ್ಯಾಚ್‍ಲೆಸ್ ಪ್ರಮೋಷ್ ಎಂಬ ಕಂಪೆನಿಯಲ್ಲಿ ಪ್ರಾಡೆಕ್ಟ್ ಪ್ರಮೋಟರ್ ಆಗಿ ಕೆಲಸಕ್ಕೆ ಸೇರಿಕೊಂಡು ರಸ್ತೆ ಬದಿಯಲ್ಲಿ 200ರೂ.ಗಳಿಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ನಂತರ ಪ್ಯೂಜನ್ ಎಂಟರ್‍ಟೈನ್‍ಮೆಂಟ್ ಎಂಬ ಈವೆಂಟ್ ಆರ್ಗನೈಜೇಷನ್ ಎಂಬ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಅಲ್ಲಿಗೆ ವಿದೇಶ ಮತ್ತು ಹೊರ ರಾಜ್ಯಗಳಿಂದ ಮಾದಕ ವಸ್ತುಗಳನ್ನು ತರಿಸಿಕೊಂಡು ಸರಬರಾಜು ಮಾಡುತ್ತಿದ್ದ.

ಈ ಇಬ್ಬರು ಆರೋಪಿಗಳು ಶಾಲಾ-ಕಾಲೇಜು ಬಳಿ ಎಲ್‍ಎಸ್‍ಡಿ, ಎಂಡಿಎಂಎ, ಕೋಕೇನ್ ಎಂಬ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಸಾಲದೆಂಬಂತೆ ಆನ್‍ಲೈನ್‍ನಲ್ಲಿ ಖರೀದಿಸುವವರಿಗೆ ರ್ಯಾಪಿಡೊ ಮತ್ತು ಡುನೋಂಜೊ ಬೈಕ್‍ಸೇವೆಗಳ ಮೂಲಕ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು.

ರ್ಯಾಪಿಡೊ ಮತ್ತು ಡುನೋಂಜೊ ಡಿಲವರಿ ಬಾಯ್‍ಗಳಿಗೆ ಆಯಾ ಕಂಪೆನಿಗಳು ಪ್ರತಿ ಟ್ರಿಪ್‍ಗೆ 40ರೂ. ಮಾತ್ರ ಕೊಡುತ್ತವೆ. ಈ ಆರೋಪಿಗಳು 500ರೂ. ಕೊಡುವ ಆಮಿಷವೊಡ್ಡಿ ಮಾದಕ ವಸ್ತುಗಳನ್ನು ಕಳುಹಿಸುತ್ತಿದ್ದರು. ಆರೋಪಿಗಳಿಂದ 47 ಲಕ್ಷ ರೂ. ಮೌಲ್ಯದ ಸಿಂಥಟಿಕ್ ಡ್ರಗ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

# ರಾಮಮೂರ್ತಿನಗರ ಪೊಲೀಸ್ ಠಾಣೆ:
ಮೊಹಮ್ಮದ್ ಇರ್ಫಾನ್ ಎರಡು ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕೆಲಸ ಇಲ್ಲದ ಸಮಯದಲ್ಲಿ ಮಾದಕ ವಸ್ತು ಸಾಗಾಣಿಕೆಯನ್ನು ಆರಂಭಿಸಿದ್ದಾನೆ.  ಮುಂಬೈ, ಆಂಧ್ರಪ್ರದೇಶಗಳಿಂದ ಖರೀದಿಸಿ ತಂದ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಶಾಲಾ-ಕಾಲೇಜು ಬಳಿ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ.

ಕೇರಳಕ್ಕೂ ಮಾರಾಟ ಮಾಡುತ್ತಿದ್ದ. ಗಾಂಜಾ ದಾಸ್ತಾನು ಮತ್ತು ಪ್ಯಾಕಿಂಗ್‍ಗಾಗಿ ಪ್ರತ್ಯೇಕ ಪ್ಲಾಟನ್ನೇ ಬಾಡಿಗೆಗೆ ಪಡೆದು ಅಲ್ಲಿ ಕೆಲಸ ಮಾಡುತ್ತಿದ್ದ. ಮತ್ತಿಬ್ಬರು ಆರೋಪಿಗಳಾದ ಆಂಧ್ರಪ್ರದೇಶದ ಚಿತ್ತೂರಿನ ರಾಮ್‍ಬಾಬು ಹಾಗೂ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಮೋಹನ್‍ರಾಜು ಎಂಬುವವರು ಆಂಧ್ರಪ್ರದೇಶದಿಂದ ಗಾಂಜಾ (ಬೂಮ್) ತರಿಸಿ ಕೆ.ಆರ್.ಪುರಂ ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಇವರಿಂದ 3 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

# ಬಾಣಸವಾಡಿ ಪೊಲೀಸ್ ಠಾಣೆ:
ಶೇಖ್ ಮೊಹಮ್ಮದ್ ಯಾಸಿನ್ ಎಂಬ ಆರೋಪಿ ಹೈದರಾಬಾದ್‍ನ ಅದಿಲಾಬಾದ್‍ನಿಂದ ಗಾಂಜಾ ತರಿಸಿಕೊಂಡು ತನ್ನ ಮನೆಯಲ್ಲೇ ದಾಸ್ತಾನು ಮಾಡಿಕೊಂಡು ಪ್ಯಾಕೆಟ್‍ಗಳನ್ನಾಗಿ ಮಾಡಿ ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜು ಬಳಿ ಮಾರಾಟ ಮಾಡುತ್ತಿದ್ದ. ಆತನಿಂದ 19 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ 2014ರಲ್ಲಿ ಅಶೋಕ್‍ನಗರ ಮತ್ತು ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

# ಡಿ.ಜೆ.ಹಳ್ಳಿ ಪೊಲೀಸ್ ಠಾಣೆ :
ಕೆಲಸ ಸಿಗದ ಕಾರಣಕ್ಕಾಗಿ ಕೊರಿಯರ್ ಬಾಯ್ ಆಗಿ ಸೇರಿಕೊಂಡು ಕೊರಿಯರ್ ಮೂಲಕವೇ ಗಾಂಜಾ ಸರಬರಾಜು ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ದಿಲೀಪ್‍ಕುಮಾರ್‍ನನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ 3.5 ಲಕ್ಷ ರೂ. ಮೌಲ್ಯದ 16 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಪೊಲೀಸರು ಭಾರತಿನಗರ, ಕೆ.ಜೆ.ಹಳ್ಳಿ, ಹೆಣ್ಣೂರು ಠಾಣೆಗಳಲ್ಲೂ ಕೂಡ ಪ್ರಕರಣ ದಾಖಲಿಸಿದ್ದಾರೆ.

ಪೂರ್ವ ವಿಭಾಗದಲ್ಲಿ ಈವರೆಗೂ 294 ಎನ್‍ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿದ್ದು, 320 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಮುರುಗನ್ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಪ್ರಶಂಸಿಸಿ ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರು 50ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ.

# ಆಗ್ನೇಯ ವಿಭಾಗ ವರದಿ:
ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಜ್ಯ ಮತ್ತು ಅಂತರ್ ರಾಜ್ಯದ 17 ಮಂದಿ ಆರೋಪಿಗಳನ್ನು ನಗರದ ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿ 67.97 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಹಾಗೂ ಆರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.   ಆರೋಪಿಗಳ ಬಂಧನದಿಂದ 8 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಆರೋಪಿಗಳಿಂದ ಸುಮಾರು 187 ಕೆ.ಜಿ.80ಗ್ರಾಂ ಗಾಂಜಾ, 950 ಗ್ರಾಂ, ಹ್ಯಾಶಿಸ್ ಆಯಿಲ್, 25 ಗ್ರಾಂ ಹೈಡ್ರೋ ಗಾಂಜಾ , 492 ಗ್ರಾಂ ಎಂಡಿಎಂಎ, 4 ಗ್ರಾಂ ಕೊಕೇನ್, ಟ್ಯಾಬ್‍ಲೆಟ್‍ಗಳು ಮತ್ತು ಕುಂಡಗಳಲ್ಲಿ ಬೆಳೆಸಿದ್ದ 8 ಹೈಡ್ರೋ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 8 ಪ್ರಕರಣಗಳಲ್ಲಿ ಎಸ್‍ಜಿ ಪಾಳ್ಯ, ತಿಲಕ ನಗರ, ಬಂಡೇ ಪಾಳ್ಯ, ಪರಪ್ಪನ ಅಗ್ರಹಾರ, ಕೋರಮಂಗಲ ಠಾಣೆ ಪೊಲೀಸರು ತಲಾ ಒಂದು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಮೂರು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಪೆÇಲೀಸ್ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ. ಪರಪ್ಪನ ಅಗ್ರಹಾರ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು, ಯುವ ಜನರು ಮಾದಕ ವ್ಯಸನಿಗಳಾಗುತ್ತಿರುವ ಬಗ್ಗೆ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಹುಸ್ಕೂರು ರಸ್ತೆಯ ದೇವಾಲಯದ ಖಾಲಿ ಜಾಗದಲ್ಲಿ ಕಾರಿನಲ್ಲಿ ಬಂದಿದ್ದ ಇಬ್ಬರನ್ನು ಬಂಧಿಸಿ 49.50 ಲಕ್ಷ ರೂ. ಗಾಂಜಾ ವಶಪಡಿಸಿಕೊಂಡಿದ್ದಾರೆ.

# ಎಲೆಕ್ಟ್ರಾನಿಕ್ ಸಿಟಿ:
ಉದ್ಯೋಗ ನಿಮಿತ್ತ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದು ಅಕ್ರಮವಾಗಿ ಗಾಂಜಾ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಕೊಲ್ಕತ್ತಾ ಮೂಲದ ರೌಪ್ ಅಲಿ ಮಂಡಲ್ ಎಂಬಾತನನ್ನು ಬಂಧಿಸಿ, 1.80 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

# ಬಂಡೇ ಪಾಳ್ಯ:
ಹೊಸೂರು ಮುಖ್ಯರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನುಬಂಧಿಸಿ 1.37 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

# ತಿಲಕ ನಗರ:
ಮೋಜು ಮಸ್ತಿ ಜೀವನ ನಿರ್ವಹಣೆ ನಡೆಸುವ ಸಲುವಾಗಿ ವಿದ್ಯಾರ್ಥಿಗಳಿಗೆ ನಶೆಯ ಚಟ ಹತ್ತಿಸಿ ಹಣಗಳಿಸುವ ಉದ್ದೇಶದಿಂದ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments