ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 280ಕ್ಕೇರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮಾ.21- ಭಾರತದಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ವೈರಾಣು ಸೋಂಕಿನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಪೀಡಿತರ ಸಂಖ್ಯೆ ಇಂದು 280ಕ್ಕೇರಿದೆ.  ಮಹಾಮಾರಿ ಕೋವಿಡ್-19 ಈಗಾಗಲೇ ದೇಶದಲ್ಲಿ ಐವರನ್ನು ಬಲಿತೆಗೆದುಕೊಂಡಿದೆ. ಸೋಂಕು ದೃಢಪಟ್ಟವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ..

ಅಲ್ಲದೇ ಬಾಧಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಇದು ಮತ್ತಷ್ಟು ಏರಿಕೆಯಾಗುವ ಭೀತಿ ಇದೆ ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.  ವಿವಿಧ ರಾಜ್ಯಗಳಲ್ಲಿ ಕಳೆದ 12 ತಾಸುಗಳ ಅವಧಿಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ ಏರುತ್ತಲೇ ಇದೆ. ಈಗಾಗಲೇ ಕರ್ನಾಟಕ, ದೆಹಲಿ, ಮಹಾರಾಷ್ಟ, ಪಂಬಾಬ್ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಈಗಾಗಲೇ ಹೆಮ್ಮಾರಿ ಐವರನ್ನು ಬಲಿ ತೆಗೆದುಕೊಂಡಿದೆ.

ಮಹಾರಾಷ್ಟ್ರ, ರಾಜಸ್ತಾನ, ಪಂಬಾಜ್, ಪಶ್ಚಿಮ ಬಂಗಾಳ ಇತರ ರಾಜ್ಯಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿದ್ದು, ಇಂದು ಬೆಳಗ್ಗೆವರೆಗೆ ದೇಶದಲ್ಲಿ ಒಟ್ಟು 280 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ.  ಮಹಾರಾಷ್ಟ್ರದಲ್ಲಿ ಮತ್ತೆ 11 ಮಂದಿಯಲ್ಲಿ ರೋಗ ಪೀಡಿತರ ಸಂಖ್ಯೆ 63ಕ್ಕೇರಿದೆ. ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣ ದಾಖಲಾಗಿರುವ ರಾಜ್ಯ ಮಹಾರಾಷ್ಟ್ರ.

ತೀವ್ರ ಕಟ್ಟೆಚ್ಚರದ ನಡುವೆಯೂ ರಾಜ್ಯದಲ್ಲಿ ಹೊಸ ಹೊಸ ಕೇಸ್‍ಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಭಯಭೀತಿಯ ವಾತಾವರಣ ನಿರ್ಮಾಣವಾಗಿದೆ. ಔರಂಗಾಬಾದ್ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 800 ಮಂದಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.  ಈಗಾಗಲೇ ಒಬ್ಬರು ಬಲಿಯಾಗಿರುವ ರಾಜಸ್ತಾನದಲ್ಲಿ ಮತ್ತೆ ಆರು ಪ್ರಕರಣಗಳು ದೃಢಪಟ್ಟಿದ್ದು, ಸೋಂಕು ಪೀಡಿತರ ಸಂಖ್ಯೆ 23ಕ್ಕೇರಿದೆ.

ರಾಜಸ್ತಾನದಲ್ಲಿ ಪುನಃ ಮೂವರಲ್ಲಿ ವೈರಾಣು ಸೋಂಕು ದೃಢಪಟ್ಟಿದ್ದು, ಅಲ್ಲಿ ಬಾಧಿತರ ಸಂಖ್ಯೆ 6ಕ್ಕೇರಿದೆ.  ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಇತ್ತೀಚೆಗೆ ಸ್ಕಾಟ್ಲೆಂಡ್ ದೇಶದಿಂದ ಹಿಂದಿರುಗಿದ್ದ 20 ವರ್ಷ ಮಹಿಳೆಯೊಬ್ಬರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದ್ದು, ಅವರನ್ನು ಕೋಲ್ಕತದ ಪ್ರತ್ಯೇಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ನೊಯ್ಡಾದಲ್ಲಿ ಇಂದು ಬೆಳಗ್ಗೆ ಮತ್ತೊಂದು ಪ್ರಕರಣ ವರದಿಯಾಗಿದ್ದು ಅಲ್ಲಿ ಈವರೆಗೆ ಐವರಿಗೆ ಬಾಧೆ ಕಾಡುತ್ತಿದೆ.  ಕೇರಳ, ದೆಹಲಿ, ಲಡಾಕ್, ಜಮ್ಮು-ಕಾಶ್ಮೀರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ. ಓಡಿಶಾ, ಛತ್ತೀಸ್‍ಗಢ, ಉತ್ತರಾಖಂಡ ಮೊದಲಾದ ರಾಜ್ಯಗಳಲ್ಲಿಯೂ ಪ್ರಕರಣಗಳು ದೃಢಪಟ್ಟಿವೆ. ದೇಶದಲ್ಲಿ ದೃಢಪಟ್ಟಿರುವ ಸೋಂಕು ಪ್ರಕರಣದಲ್ಲಿ 35ಕ್ಕೂ ಹೆಚ್ಚು ವಿದೇಶಿಯರೂ ಇದ್ದಾರೆ.  ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಕಾಟ ತೀವ್ರಗೊಂಡಿರುವುದರಿಂದ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಮೇರೆಗೆ ಇಡೀ ಭಾರತವೇ ಜನತಾ ಕಫ್ರ್ಯೂಗೆ ಒಳಗಾಗಲಿದೆ.

Facebook Comments