BIG NEWS : ವಿಶ್ವಾದ್ಯಂತ ಕೊರೊನಾ ಮಹಾಮಾರಿಗೆ 20ಲಕ್ಷ ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮೇರಿಲ್ಯಾಂಡ್, ಜ.16- ವಿಶ್ವದಾದ್ಯಂತ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಒಂದು ಸಣ್ಣ ದೇಶದ ಜನಸಂಖ್ಯೆಗೆ ಸಮಾನವಾಗಿದೆ ಎಂಬ ಅಂಶ ಇದೀಗ ಬೆಚ್ಚಿ ಬೀಳಿಸಿದೆ. ಇದುವರೆಗೂ ಕೊರೊನಾ ಸೋಂಕಿಗೆ 20 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಇದು ಬ್ರಸೆಲ್ಸ್, ಮೆಕ್ಕಾ ಹಾಗೂ ವಿಯೆನ್ನಾದಂತಹ ಸಣ್ಣ ರಾಷ್ಟ್ರದ ಜನಸಂಖ್ಯೆಗೆ ಸಮನಾಗಿದೆ ಎಂದು ಜಾನ್ಸ್ ಅಬ್‍ಕಿನ್ಸ್ ವಿಶ್ವವಿದ್ಯಾಲಯದ ವರದಿ ಬಹಿರಂಗಗೊಳಿಸಿದೆ.

ಸದ್ಯ ವಿಶ್ವದಾದ್ಯಂತ ಅಂದಾಜು 10 ಕೋಟಿಯಷ್ಟು ಮಂದಿ ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದು , 20 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆಯಾ ದೇಶಗಳು ಬಿಡುಗಡೆ ಮಾಡಿರುವ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆಯನ್ನು ಆದರಿಸಿ ಈ ವರದಿ ತಯಾರಿಸಲಾಗಿದೆ.

ಕಳೆದ ಜನವರಿ ಆರಂಭದಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ 8 ತಿಂಗಳಲ್ಲಿ 10 ಲಕ್ಷ ಮಂದಿಯನ್ನು ಬಲಿ ತೆಗೆದುಕೊಂಡಿದ್ದರೆ, ಉಳಿದ 10 ಲಕ್ಷ ಮಂದಿ ಕೇವಲ 4 ತಿಂಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕೊರೊನಾ ಸೋಂಕಿನ ತೀವ್ರತೆಯಿಂದ ಸಾಕಷ್ಟು ಮಂದಿ ತಮ್ಮವರನ್ನು ಕಳೆದುಕೊಂಡಿದ್ದು , ಅವರ ಮುಖದಲ್ಲಿ ಮಂದಹಾಸ ಕಾಣದಂತಾಗಿರುವುದು ದುರ್ದೈವದ ಸಂಗತಿ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೇರಸ್ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕವೊಂದರಲ್ಲೇ ಕೊರೊನಾ ಸೋಂಕಿನಿಂದ ಸುಮಾರು 4 ಲಕ್ಷ ಮಂದಿ ಸಾವನ್ನಪ್ಪಿದ್ದರೆ, ಎರಡನೆ ಸ್ಥಾನದಲ್ಲಿ ಬ್ರೆಜಿಲ್ ದೇಶವಿದ್ದರೆ, ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿಗೆ ವಿಶ್ವದೆಲ್ಲೆಡೆ ಲಸಿಕೆ ಲಭ್ಯವಾಗುತ್ತಿರುವ ಸಂದರ್ಭದಲ್ಲೇ ಮಹಾಮಾರಿಗೆ 20 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿರುವುದು ಈ ಶತಮಾನ ಕಂಡ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ.

ಈ ಮಧ್ಯೆ ಕೊರೊನಾ ವೈರಾಣು ಹುಟ್ಟೂರು ಚೀನಾದ ವುಹಾನ್ ನಗರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ 10 ತಜ್ಞರನ್ನೊಳಗೊಂಡ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

Facebook Comments