ರಾಜ್ಯದಲ್ಲಿ ನಾಳೆ 2ನೇ ಹಂತದ ಮತದಾನ, ನಿರ್ಧಾರವಾಗಲಿದೆ ಘಟಾನುಘಟಿಗಳ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.22- ತೀವ್ರ ಹಣಾಹಣಿಯಿಂದ ಕೂಡಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ 2ನೇ ಹಂತದ ಮತದಾನ ನಡೆಯಲಿದ್ದು, ಪ್ರಮುಖ ರಾಜಕೀಯ ಧುರೀಣರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

14 ಕ್ಷೇತ್ರಗಳಿಗೆ ಕಣದಲ್ಲಿ 237 ಅಭ್ಯರ್ಥಿಗಳು ಸ್ಫರ್ಧಿಸಿದ್ದಾರೆ. ಒಟ್ಟು 2,43,03,279 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ.

ಕಳೆದ 18ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.68ರಷ್ಟು ಮತದಾನವಾಗಿತ್ತು. ನಾಳೆ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.

14 ಕ್ಷೇತ್ರಗಳಲ್ಲಿ ಬಿಜೆಪಿ ಎಲ್ಲ ಕಡೆ ಸ್ಪರ್ಧಿಸಿದ್ದರೆ, ದೋಸ್ತಿ ಪಕ್ಷಗಳಾದ ಜೆಡಿಎಸ್ ಮೂರು ಹಾಗೂ ಕಾಂಗ್ರೆಸ್ 11 ಕಡೆ ಸ್ಪರ್ಧಿಸಿದೆ. ಶಿವಮೊಗ್ಗ ಹಾಗೂ ದಾವಣಗೆರೆ ಹೊರತುಪಡಿಸಿದರೆ ಉಳಿದ 12 ಕ್ಷೇತ್ರಗಳು ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿವೆ. ಇದು ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ಬಾರಿ ದೋಸ್ತಿ ಪಕ್ಷಗಳಿಂದ ಪ್ರಬಲ ಪೈಪೋಟಿ ಎದುರಾಗಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 11 ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿರುವುದರಿಂದ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

# ಕಣದಲ್ಲಿ ಘಟಾನುಘಟಿಗಳು:
ನಾಳೆ ನಡೆಯಲಿರುವ 2ನೇ ಹಂತದ ಮತದಾನದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನ ಅನೇಕ ನಾಯಕರ ರಾಜಕೀಯ ಭವಿಷ್ಯ ಮತ ಪೆಟ್ಟಿಗೆಯಲ್ಲಿ ನಿರ್ಧಾರವಾಗಲಿದೆ.

ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ(ಕಲಬುರಗಿ), ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ(ಶಿವಮೊಗ್ಗ), ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಪುತ್ರ ಮಧುಬಂಗಾರಪ್ಪ(ಶಿವಮೊಗ್ಗ), ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ(ವಿಜಾಪುರ), ಅನಂತಕುಮಾರ್ ಹೆಗಡೆ(ಉತ್ತರಕನ್ನಡ), ಹಾಲಿ ಸಂಸದರಾದ ಸುರೇಶ್ ಅಂಗಡಿ(ಬೆಳಗಾವಿ), ಪ್ರಕಾಶ್ ಹುಕ್ಕೇರಿ(ಚಿಕ್ಕೋಡಿ), ಪ್ರಹ್ಲಾದ್ ಜೋಷಿ(ಧಾರವಾಡ), ವಿ.ಎಸ್.ಉಗ್ರಪ್ಪ (ಬಳ್ಳಾರಿ), ಪಿ.ಸಿ.ಗದ್ದಿಗೌಡರ್(ಬಾಗಲಕೋಟೆ), ಜಿ.ಎಂ.ಸಿದ್ದೇಶ್ವರ್(ದಾವಣಗೆರೆ) ಸೇರಿದಂತೆ ಅನೇಕರು ಕಣದಲ್ಲಿದ್ದಾರೆ.

ಈ ಚುನಾವಣೆಯಲ್ಲಿ ಯಡಿಯೂರಪ್ಪ ಶಿವಮೊಗ್ಗದಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಬೇಕಾದ ಸಂದಿಗ್ಧತೆಗೆ ಸಿಲುಕಿದ್ದರೆ ಅತ್ತ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಹಿಂದೆಂದೂ ಕಾಣದ ಸ್ಪರ್ಧೆ ಎದುರಾಗಿದೆ.

ಬಿಜೆಪಿಯಿಂದ ಖರ್ಗೆ ಎದುರು ಡಾ.ಉಮೇಶ್‍ಜಾಧವ್ ಸ್ಪರ್ಧಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಗಣಿ ಜಿಲ್ಲೆ ಬಳ್ಳಾರಿಯಲ್ಲಿ ವಿ.ಎಸ್.ಉಗ್ರಪ್ಪ, ಬಿಜೆಪಿಯ ದೇವೇಂದ್ರಪ್ಪ ಪ್ರಬಲ ಪೈಪೋಟಿಯನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ಈ ಬಾರಿ ಪ್ರತಿ ಸ್ಪರ್ಧೆಯೊಡ್ಡಿದ್ದಾರೆ.

ಧಾರವಾಡದಲ್ಲಿ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿರುವ ಪ್ರಹ್ಲಾದ್ ಜೋಷಿಗೆ ಮಾಜಿ ಸಚಿವ ವಿನಯ್‍ಕುಲಕರ್ಣಿ, ಬೆಳಗಾವಿಯಲ್ಲಿ ಸುರೇಶ್ ಅಂಗಡಿಗೆ ಕಾಂಗ್ರೆಸ್‍ನ ಸಾಧುನವರ, ಚಿಕ್ಕೋಡಿಯಲ್ಲಿ ಪ್ರಕಾಶ್ ಹುಕ್ಕೇರಿಗೆ ಅಣ್ಣಾ ಜೊಲ್ಲೆ, ಬಾಗಲಕೋಟೆಯಲ್ಲಿ ಗದ್ದಿಗೌಡರಿಗೆ ವೀಣಾ ಕಾಶಪ್ಪನವರ್, ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ್‍ಗೆ ಕಾಂಗ್ರೆಸ್‍ನ ಎಚ್.ಬಿ.ಮಂಜಪ್ಪ ಸೇರಿದಂತೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ದೋಸ್ತಿ ಮತ್ತು ಬಿಜೆಪಿ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದೆ.

# ಬಿಗಿಭದ್ರತೆ:
ಚುನಾವಣೆ ನಿರ್ವಹಣೆಗೆ 2.03 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 2,174 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. 1,478 ಬೂತ್‍ಗಳಲ್ಲಿ ವಿಡಿಯೋಗ್ರಾಫರ್‍ಗಳನ್ನು ಹಾಗೂ 1,479 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಮತ್ತು ಶಿವಮೊಗ್ಗದ ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin