ಟೀಂ ಇಂಡಿಯಾ ಬೌಲರ್ಗಳ ಸಾಹಸ : 195ಕ್ಕೆ ಆಸೀಸ್ ಸರ್ವಪತನ
ಮೆಲ್ಬೊರ್ನ್, ಡಿ.26- ಅಡಿಲೇಡ್ ಟೆಸ್ಟ್ನಲ್ಲಿ ಹೀನಾಯ ಸೋಲು ಕಂಡಿದ್ದರೂ ಕ್ರೀಡಾ ಸ್ಫೂರ್ತಿಯನ್ನು ಕಳೆದುಕೊಳ್ಳದ ಭಾರತೀಯ ಬೌಲರ್ಗಳು ಇಂದಿನಿಂದ ಆರಂಭಗೊಂಡಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಉತ್ತಮ ಹೋರಾಟ ನಡೆಸಿ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ ಹಾಗೂ ಭಾರತ ವಿರುದ್ಧ ನಡೆಯುತ್ತಿರುವ 100ನೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಟೀಮ್ ಪೇನ್ ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದರು.
ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಗೆದ್ದು ಸರಣಿ ಸಮಬಲಗೊಳಿಸುವ ದೃಷ್ಟಿಯಿಂದ ಐವರು ಬೌಲರ್ಗಳೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ನಾಯಕ ಅಜೆಂಕಾ ರಹಾನೆಯ ತಂತ್ರ ಫಲಿಸಿದ್ದು ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 195 ರನ್ಗಳಿಗೆ ಸರ್ವಪತನ ಕಂಡಿದೆ.
#ಶೂನ್ಯ ಸುತ್ತಿದ ಬನ್ರ್ಸ್:
ಅಡಿಲೇಡ್ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಅಸೀಸ್ನ ಆರಂಭಿಕ ಆಟಗಾರ ಬನ್ರ್ಸ್ಗೆ ಆರಂಭದಲ್ಲೇ ಲಗಾಮು ಹಾಕಿದ ಜಸ್ಪ್ರೀತ್ ಬೂಮ್ರಾ ರನ್ ಖಾತೆಯನ್ನೂ ತೆರೆಯಲು ಬಿಡದೆ ಪೆವಿಲಿಯನ್ ದಾರಿ ತೋರಿಸಿದರು.
#ವೇಡ್- ಲಬುಸಂಗ್ಗೆ ಆಸರೆ:
ತಂಡದ ಮೊತ್ತ 10 ರನ್ಗಳಾಗುವಷ್ಟರಲ್ಲೇ ಬನ್ರ್ಸ್ ವಿಕೆಟ್ ಕಳೆದುಕೊಂಡರೂ ಕೂಡ 2ನೆ ವಿಕೆಟ್ ಜೊತೆಗೂಡಿದ ಮ್ಯಾಥ್ಯೂ ವೇಡ್ (30 ರನ್, 3 ಬೌಂಡರಿ) ಹಾಗೂ ಲಬುಸಂಗ್ಗೆ (48 ರನ್, 4 ಬೌಂಡರಿ) ತಂಡಕ್ಕೆ ಆಸರೆ ಆದರು, ಈ ಜೋಡಿಯು 2ನೆ ವಿಕೆಟ್ಗೆ 25 ರನ್ಗಳ ಕಾಣಿಕೆ ನೀಡಿ ಅಪಾಯಕಾರಿಯಾಗುತ್ತಿದ್ದಂತೆ ರವಿಚಂದ್ರನ್ ಅಶ್ವಿನ್ ಬೌಲಿಂಗ್ನಲ್ಲಿ ವೇಡ್, ಜಡೇಜಾಗೆ ಕ್ಯಾಚ್ ನೀಡಿ ಮೈದಾನ ತೊರೆದ ಬೆನ್ನಲ್ಲೇ ಸ್ಮಿತ್(0ರನ್) ವಿಕೆಟ್ ಕಬಳಿಸಿದ ಅಶ್ವಿನ್ ಆಸ್ಟೇಲಿಯಾದ ಬೃಹತ್ ಮೊತ್ತದ ಕನಸಿಗೆ ಲಗಾಮು ಹಾಕಿದರು.
#ನಾಯಕನ ಸಮಯೋಜಿತ ಆಟ:
38 ರನ್ಗಳಿಗೆ ಆಸ್ಟ್ರೇಲಿಯಾದ ಪ್ರಮುಖ 3 ವಿಕೆಟ್ ಉರುಳಿ ಸಂಕಷ್ಟದಲ್ಲಿದ್ದಾಗ ಮೈದಾನಕ್ಕೆ ಇಳಿದ ನಾಯಕ ಟ್ರಾವಿಸ್ ಹೆಡ್ ಸಮಯೋಚಿತ ಆಟಕ್ಕೆ ಮುಂದಾಗಿ 4ನೆ ವಿಕೆಟ್ಗೆ ಲಬುಸಂಗೆ ಜೊತೆಗೂಡಿ 84 ರನ್ಗಳ ಉಪಯುಕ್ತ ಕಾಣಿಕೆ ನೀಡಿದರಾದರೂ ವೈಯಕ್ತಿಕ 38 ರನ್ ಗಳಿಸಿದ್ದಾಗ ಬೂಮ್ರಾ ಬೌಲಿಂಗ್ನಲ್ಲಿ ಭಾರತ ತಂಡದ ನಾಯಕ ರಹಾನೆ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರು.
#ಸಿರಾಜ್ಗೆ ಚೊಚ್ಚಲ ವಿಕೆಟ್:
ಐಪಿಎಲ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಆರ್ಸಿಬಿ ಆಟಗಾರ ಮೊಹಮ್ಮದ್ ಸಿರಾಜ್ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ಉತ್ತಮ ಬೌಲಿಂಗ್ ಮಾಡುವ ಮೂಲಕ ಅರ್ಧಶತಕದ ಹೊಸ್ತಿನಲ್ಲಿದ್ದ ಲಬುಸಂಗೆ(48 ರನ್, 4 ಬೌಂಡರಿ) ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ನಲ್ಲಿ ಮೊದಲ ಬಲಿ ಪಡೆದರು. ನಂತರ ಯುವ ಆಟಗಾರ ಗ್ರೀನ್(12ರನ್)ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು.
164 ರನ್ಗಳಿಗೆ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡರೂ ಸ್ಫೋಟಕ ಆಟವಾಡಿದ ಲಿಯೋನ್ (20ರನ್, 2 ಬೌಂಡರಿ, 1 ಸಿಕ್ಸರ್) ಅಂತಿಮ ಹಂತದವರೆಗೂ ಕ್ರೀಸ್ನಲ್ಲಿದ್ದು ತಂಡದ ಮೊತ್ತವನ್ನು195 ರನ್ಗಳಿಗೆ ಹಿಗ್ಗಿಸಿ ವೇಗಿ ಜಸ್ಪ್ರೀತ್ ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ಭಾರತ ಪರ ಬೂಮ್ರಾ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ರವಿಚಂದ್ರನ್ ಅಶ್ವಿನ್ 3, ಮೊಹಮ್ಮದ್ ಸಿರಾಜ್ 2, ಜಾಡೇಜಾ 1 ವಿಕೆಟ್ ಕಬಳಿಸಿದರು.
#ಭಾರತ ಉತ್ತಮ ಹೋರಾಟ:
ಪ್ರಥಮ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಆರಂಭದಲ್ಲೇ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡರೂ ಶುಭಮನ್ಗಿಲ್(28 ರನ್, 5 ಬೌಂಡರಿ), ಪೂಜಾರ (7ರನ್, 1 ಬೌಂಡರಿ)ರ ಸಮಯೋಜಿತ ಆಟದಿಂದಾಗಿ 1 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿತ್ತು.