3ನೇ ದಿನವೂ ಸಂಸತ್‍ನಲ್ಲಿ ಪಿಎನ್‍ಬಿ, ಕಾವೇರಿ ಕೋಲಾಹಲ

ಈ ಸುದ್ದಿಯನ್ನು ಶೇರ್ ಮಾಡಿ

Session-Parliment
ನವದೆಹಲಿ, ಮಾ.7-ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ ಹಾಗೂ ಮತ್ತಿತರ ವಿಷಯಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ ಕಲಾಪ ಮುಂದೂಡಲಾಗಿದೆ. ಬಜೆಟ್ ಅಧಿವೇಶದ ಮೂರನೆ ದಿನವೂ ವಿವಿಧ ವಿವಾದಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ.  ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪಿಎನ್‍ಬಿ ವಿಷಯವನ್ನು ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿತು. ಇದೇ ವೇಳೆ ಎನ್‍ಡಿಎ ಮಿತ್ರ ಪಕ್ಷ ಟಿಡಿಪಿ ಮತ್ತು ಟಿಆರ್‍ಎಸ್ ಸದಸ್ಯರು ಆಂಧ್ರಪ್ರದೇಶಕ್ಕಾಗಿ ವಿಶೇಷ ಪ್ಯಾಕೇಜ್‍ಗಾಗಿ ತನ್ನ ಬೇಡಿಕೆಯನ್ನು ಯಥಾ ಪ್ರಕಾರ ಮುಂದುವರಿಸಿದರು.

ಇದೇ ವೇಳೆ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಪಟಟು ಹಿಡಿದು ಧರಣಿ ನಡೆಸಿದರು.
ಇನ್ನೊಂದೆಡೆ ಶಿವಸೇನೆ ಸದಸ್ಯರು ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಪ್ರತಿಭಟನೆ ನಡೆಸಿದರು. ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿದ ಈ ಪಕ್ಷಗಳ ಸದಸ್ಯರು ಧರಣಿ ನಡೆಸಿದರು. ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಗೊಳಿಸಲು ಯತ್ನಿಸಿ ವಿಫಲರಾದ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.  ಮತ್ತೆ ಕಲಾಪ ಸಮಾವೇಶಗೊಂಡಾಗ ಅದೇ ಪರಿಸ್ಥಿತಿ ಮುಂದುವರಿದು ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.

ಇದರೊಂದಿಗೆ ಸತತ ಮೂರು ದಿನಗಳಿಂದ ಲೋಕಸಭೆ ಕಲಾಪಕ್ಕೆ ಅಡ್ಡಿಯಾಗಿದೆ.  ರಾಜ್ಯಸಭೆಯಲ್ಲೂ ಗದ್ದಲ: ಸಂಸತ್ತಿನ ಮುಂದುವರೆದ ಬಜೆಟ್ ಅಧಿವೇಶನದ ಮೂರನೆ ದಿನವೂ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಬಿಎನ್‍ಬಿ) ಹಗರಣ ಹಾಗೂ ಕಾವೇರಿ ಜಲವಿವಾದ ವಿಷಯಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ.
ಸದನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಟಿಎಂಸಿ ಸದಸ್ಯರು ಬಿಎನ್‍ಬಿ ಹಗರಣ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಟಿಡಿಪಿ ಸದಸ್ಯರು ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಬಿಗಿಪಟ್ಟು ಮುಂದುವರಿಸಿದರು. ಇದರಿಂದಾಗಿ ಸದನದಲ್ಲಿ ಭಾರೀ ಗದ್ದಲ-ಕೋಲಾಹಲ ನಿರ್ಮಾಣವಾಯಿತು.
ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನ ಪಡಿಸಲು ಸಭಾಪತಿ ವೆಂಕಯ್ಯನಾಯ್ಡು ಮನವಿ ಮಾಡಿದರೂ ಪರಿಸ್ಥಿತಿ ತಿಳಿಗೊಳ್ಳಲಿಲ್ಲ. ಇದರಿಂದ ಬೇಸತ್ತ ನಾಯ್ಡು ಅವರು, ಅರ್ಧ ತಾಸು ಕಾಲ ಕಲಾಪ ಮುಂದೂಡಿದರು.

ಮತ್ತೆ ಕಲಾಪ ಸಮಾವೇಶಗೊಂಡಾಗ ಇದೇ ಪರಿಸ್ಥಿತಿ ಮುಂದುವರೆಯಿತು. ಟಿಎಂಸಿ, ಎಐಎಡಿಎಂಕೆ, ಡಿಎಂಕೆ ಮತ್ತು ಟಿಡಿಪಿ ಸದಸ್ಯರು ತಮ್ಮ ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಧರಣಿ ಮುಂದುವರೆಸಿದ್ದರಿಂದ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

Facebook Comments

Sri Raghav

Admin