3 ಪ್ರತ್ಯೇಕ ಅಪಘಾತಗಳಲ್ಲಿ, 9 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

accident

ಮೈಸೂರು/ಮಂಗಳೂರು/ಚಿಕ್ಕಮಗಳೂರು, ಮೇ 11- ರಾಜ್ಯದಲ್ಲಿ ವಿವಿಧೆಡೆ ಸಂಭವಿಸಿದ ರಸ್ತೆ ಅಪಘಾತ ಹಾಗೂ ದುರಂತದಲ್ಲಿ ಒಟ್ಟು 9 ಮಂದಿ ದಾರುಣವಾಗಿ ಅಸುನೀಗಿದ್ದಾರೆ. ಮೈಸೂರು ಬಳಿ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮೃತಪಟ್ಟರೆ, ಬಂಟ್ವಾಳದಲ್ಲಿ ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.  ಇನ್ನು ಚಿಕ್ಕಮಗಳೂರಿನ ತರೀಕೆರೆಯಲ್ಲಿ ಮರಳು ತೆಗೆಯುವಾಗ ಮಣ್ಣಿನ ದಿಬ್ಬ ಕುಸಿದು ಮೂವರು ಮೃತಪಟ್ಟಿದ್ದಾರೆ.

ಮೈಸೂರು ವರದಿ:

ಒಂದೇ ಬೈಕ್‍ನಲ್ಲಿ ಮೂವರು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಕೆ.ಆರ್.ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.   ಮಹದೇವಪುರ ಗ್ರಾಮದ ನಿವಾಸಿಗಳಾದ ರಾಜೇಶ್(22) ಮತ್ತು ನಂದನ್(21), ಅಭಿಷೇಕ್ ಮೃತಪಟ್ಟ ದುರ್ದೈವಿ ಯುವಕರು.   ನಿನ್ನೆ ತಡರಾತ್ರಿ ರಾಜೇಶ್, ನಂದನ್ ಮತ್ತು ಅಭಿಷೇಕ್ ಒಂದೇ ಬೈಕ್‍ನಲ್ಲಿ ತೆರಳುತ್ತಿದ್ದರು. ಮಾನಂದವಾಡಿ ರಸ್ತೆಯ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ರಾಜೇಶ್, ನಂದನ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಭಿಷೇಕ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಕೆ.ಆರ್.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಮಂಗಳೂರು ವರದಿ:

ಬಂಟ್ವಾಳ ತಾಲೂಕಿನ ಕಲ್ಲಟ್ಕ ಬಳಿ ಬೈಕ್‍ನಲ್ಲಿ ತೆರಳುತ್ತಿದ್ದ ಮೂವರ ಮೇಲೆ ಲಾರಿ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಇಂದು ಮುಂಜಾನೆ ನಡೆದಿದೆ.  ಮೃತರನ್ನು ಹರೀಶ್ (28), ನಾರಾಯಣ (34) ಹಾಗೂ ವಿಶ್ವಾಸ್ (10) ಎಂದು ಗುರುತಿಸಲಾಗಿದೆ.  ಇವರು ಒಂದೇ ಬೈಕ್‍ನಲ್ಲಿ ಕಾರ್ಕಳದ ಕಬಕಾರು ಈಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿ ವಾಪಸಾಗುತ್ತಿದ್ದಾಗ ಮಂಗಳೂರು ಕಡೆಗೆ ಹೋಗುತ್ತಿದ್ದ ಮೀನು ಸಾಗಣೆ ಲಾರಿ ಇವರ ಬೈಕ್‍ಗೆ ಡಿಕ್ಕಿ ಹೊಡೆದಿದೆ.  ಲಾರಿ ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ವರದಿ:

ಮಣ್ಣು ತೆಗೆಯುವಾಗ ಮೂವರು ಕೂಲಿ ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ತರೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತರೀಕೆರೆ ತಾಲ್ಲೂಕಿನ ಗೇರುಮರಡಿ ನಿವಾಸಿಗಳಾದ ಅರುಣ(22), ನವೀನ್(20), ಮಂಜುನಾಥ್(22) ಮೃತಪಟ್ಟ ದುರ್ದೈವಿಗಳು. ಇಂದು ಬೆಳಗ್ಗೆ ಎಂದಿನಂತೆ ಕೂಲಿ ಕೆಲಸಕ್ಕೆ ಕೆರೆಹೊಸಹಳ್ಳಿ ಗ್ರಾಮದ ಚೆಕ್‍ಡ್ಯಾಂ ಬಳಿ ಮಣ್ಣು ತೆಗೆಯುವಾಗ ಮಣ್ಣು ಕುಸಿದಿದ್ದು , ಮೂವರೂ ಮಣ್ಣಿನಡಿ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸರ್ಕಲ್ ಇನ್‍ಸ್ಪೆಕ್ಟರ್ ತಿಪ್ಪೇಸ್ವಾಮಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin