3 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಂಜೆ ಸರ್ವಪಕ್ಷ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

All-Party

ಬೆಂಗಳೂರು,ಅ.19-ಮಹದಾಯಿ ನದಿ ನೀರು ಹಂಚಿಕೆ ಸಂಬಂಧ 21ರಂದು ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚಿಸಬೇಕಾದ ವಿಷಯ ಕುರಿತಂತೆ ಇಂದು ಸಂಜೆ ಸರ್ವಪಕ್ಷ ಸಭೆ ನಡೆಯಲಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಯಲಿದ್ದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.  21ರಂದು ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗೋವಾ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗೆ ಭಾಗವಹಿಸುವುದಾಗಿ ತಿಳಿಸಿದ ಬೆನ್ನಲ್ಲೇ ಗೋವಾ ಸಿಎಂ ಲಕ್ಷ್ಮಿಕಾಂತ್ ಪರ್ಸೇಕರ್ ಕೂಡ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ಸಭೆಯಲ್ಲಿ ಕರ್ನಾಟಕದ ನಿಲುವನ್ನು ಸ್ಪಷ್ಟಪಡಿಸುವ ಪೂರ್ವಭಾವಿಯಾಗಿ ಇಂದು ಸರ್ವಪಕ್ಷ ನಡೆಯಲಿದೆ. ರಾಜ್ಯದ ನಿಲುವು ಏನಾಗಿರಬೇಕು, ಈ ಯೋಜನೆಯಿಂದ ಆಗುವ ಅನುಕೂಲತೆ , ಇದರ ಸದುದ್ದೇಶ ಸೇರಿದಂತೆ ಇತ್ಯಾದಿ ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ.  ಈ ಹಿಂದೆ ಕಾವೇರಿ ನದಿ ನೀರು ಬಿಕ್ಕಟ್ಟು ಉಂಟಾದಾಗ ಸಿಎಂ ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆದಿದ್ದರು. ಈಗ ಮಹದಾಯಿ ನದಿನೀರು ಹಂಚಿಕೆ ವಿಷಯದಲ್ಲೂ ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ.  ಸಭೆಗೆ ವಿಧಾನಮಂಡಲ ಉಭಯ ಸದನಗಳ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಉಪನಾಯಕ ವೈ.ಎಸ್.ವಿ.ದತ್ತ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದರು, ಹಿರಿಯ ಸಚಿವರು, ರೈತ ಮುಖಂಡರು ಸೇರಿದಂತೆ ಮತ್ತಿತರರು ಪಾಲ್ಗೊಂಡು ಸರ್ಕಾರಕ್ಕೆ ಸಲಹೆ ಮಾರ್ಗದರ್ಶನ ನೀಡಲಿದ್ದಾರೆ.

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಸೇರಿದಂತೆ ನಗರ ಹಾಗೂ ಒಂದು ಸಾವಿರಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಿಗೆ ಮಹದಾಯಿ ನದಿಯಿಂದ ಕಳಸಾ ಬಂಡೂರಿ ನಾಲಾ ಮೂಲಕ ಏಳೂವರೆ ಟಿಎಂಸಿ ನೀರು ಬಳಸಿಕೊಂಡು ಕುಡಿಯುವ ನೀರು ಪೂರೈಕೆ ಮಾಡುವುದು ಈ ಯೋಜನೆಯ ಮೂಲ ಉದ್ದೇಶ.  ಆದರೆ ಇದಕ್ಕೆ ಗೋವಾ ಖ್ಯಾತೆ ತೆಗೆದಿದೆ. ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಮಹದಾಯಿ ನದಿಯಿಂದ ಒಂದು ಹನಿ ನೀರು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದೆ.  ಈಗಾಗಲೇ ಉಭಯ ರಾಜ್ಯಗಳ ವಿವಾದ ನ್ಯಾಯಾಧಿಕರಣದ ಮೆಟ್ಟಿಲೇರಿತ್ತು. ಕರ್ನಾಟಕದ ಅರ್ಜಿಯನ್ನು ನ್ಯಾಯಾಧೀಕರಣ ತಿರಸ್ಕರಿಸಿದ್ದರಿಂದ ಉತ್ತರ ಕರ್ನಾಟಕ ಹೊತ್ತಿ ಉರಿದಿತ್ತು.

ಇತ್ತೀಚೆಗೆ ಕಾವೇರಿ ವಿವಾದ ತಾರಕಕ್ಕೇರಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಿದ್ದರು. ಇದೇ ರೀತಿ ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಖುದ್ದು ಮೋದಿಯೇ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸೂಚನೆ ಕೊಟ್ಟಿದ್ದರು

► Follow us on –  Facebook / Twitter  / Google+

Facebook Comments

Sri Raghav

Admin