3-4 ದಿನದಲ್ಲಿ ಮಂಡಳಿ ರಚನೆ ಸಾಧ್ಯವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

siddu
ಬೆಂಗಳೂರು, ಅ.3- ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಮೂರ್ನಾಲ್ಕು ದಿನಗಳಲ್ಲಿ ರಚನೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಇಂದು ನಡೆದ ವಿಶೇಷ ವಿಧಾನ ಸಭೆಯ ಕಲಾಪದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಿಂದ ಹಿಂದೆ ಸರಿದ ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಉತ್ತರ ನೀಡಿದ ಮುಖ್ಯಮಂತ್ರಿಯವರು, ಕಾನೂನು ಮತ್ತು ತಾಂತ್ರಿಕವಾಗಿ ನಾಲ್ಕು ದಿನದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಲು ಸಾಧ್ಯವಿಲ್ಲ. ಸಂವಿಧಾನ ಕಲಂ 6(ಎ)(7)ರ ಅನ್ವಯ ಸಂಸತ್‍ನಲ್ಲಿ ಚರ್ಚಿಸಿದ ನಂತರವೇ ಮಂಡಳಿ ರಚಿಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಅವರು ಇಂದು ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ನಮಗೂ ಮಾಹಿತಿ ನೀಡಿದ್ದಾರೆ. ಆದರೆ ಈ ಮೊದಲು ಸೆ.30ರಂದು ನ್ಯಾಯಾಲಯ ಆದೇಶ ನೀಡಿದಾಗ ಅಟಾರ್ನಿ ಜನರಲ್ ಮಂಡಲಿ ರಚನೆಗೆ ಒಪ್ಪಿದ್ದರು ಎಂದು ಆಕ್ಷೇಪ ವ್ಯಕ್ತ ಪಡಿಸಿದರು.

ಕರ್ನಾಟಕ ಸರ್ಕಾರ ಮಂಡಳಿ ರಚನೆಗೆ ವಿರೋಧ ವ್ಯಕ್ತ ಪಡಿಸಿ ಹಾಗೂ ಸುಪ್ರೀಂಕೋರ್ಟ್ ಆದೇಶಗಳ ಮಾರ್ಪಾಡು ಮಾಡುವಂತೆ ಮೇಲ್ಮನವಿ ಸಲ್ಲಿಸಿದೆ. ನಮ್ಮ ಅರ್ಜಿ ನಾಳೆ ವಿಚಾರಣೆಗೆ ಬರಲಿದೆ. ಕರ್ನಾಟಕ ಸರ್ಕಾರ 2007ರಿಂದಲೂ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಈ ಹಿನ್ನಲೆಯಲ್ಲೇ 2013ರಲ್ಲಿ ಮೇಲುಸ್ತುವಾರಿ ಸಮಿತಿ ಹಾಗೂ ತಜ್ಞರ ಸಮಿತಿ ರಚನೆಯಾಗಿದೆ. ತಜ್ಞರ ಸಮಿತಿಗಳು ಎರಡು ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವಾಸ್ತವ ಸಂಗತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದರು.ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದ ನಂತರವೇ ರಾಜ್ಯಗಳು ತಮ್ಮ ಸದಸ್ಯರ ಪಟ್ಟಿಯನ್ನು ನೀಡಬೇಕು. ಆದರೆ ಸುಪ್ರೀಂಕೋರ್ಟ್, ಮಂಡಳಿ ರಚನೆಗೂ ಮೊದಲೇ ಸದಸ್ಯತ್ವಕ್ಕೆ ನಾಮನಿರ್ದೇಶನಗೊಳ್ಳುವವರ ಪಟ್ಟಿ ಕಳುಹಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲೇ ಸುಪ್ರೀಂಕೋರ್ಟ್‍ನ ಆದೇಶ ಸರಿಯಿಲ್ಲ, ಮರಣಶಾಸನವಾಗಿದೆ ಎಂದು ನಾನು ಹೇಳಿದ್ದೆ ಎಂದರು.

 

► Follow us on –  Facebook / Twitter  / Google+

Facebook Comments

Sri Raghav

Admin