ಕಾನ್‍ಸ್ಟೆಬಲ್ ಮೇಲೆ ಹಲ್ಲೆ ಮಾಡಿದ ಮೂವರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 16-ಕಾನ್‍ಸ್ಟೆಬಲ್ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಮೂವರನ್ನು ಜೆಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮುದ್ದಮ್ಮ ಗಾರ್ಡನ್ ನಿವಾಸಿಗಳಾದ ರಿಜ್ವಾನ್ ಖಾನ್, ರಿಡ್ವಾನ್ ಖಾನ್ ಮತ್ತು ಸುಲ್ತಾನ್ ಬಂಧಿತರು.

ಮೇ 8ರಂದು ರಾತ್ರಿ 8.15ರ ಸುಮಾರಿನಲ್ಲಿ ಜೆಸಿ ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಜತೆ ಕಾನ್‍ಸ್ಟೆಬಲ್ ಸಂತೋಷ್‍ಕುಮಾರ್ ಮುದ್ದಮ್ಮ ಗಾರ್ಡನ್‍ಗೆ ಕರ್ತವ್ಯಕ್ಕೆ ತೆರಳಿದ್ದರು.

ಈ ವೇಳೆ ಸಬ್‍ಇನ್ಸ್‍ಪೆಕ್ಟರ್ ಮತ್ತೊಂದು ಸ್ಟ್ರೀಟ್‍ಗೆ ಹೋದಾಗ ಕಾನ್‍ಸ್ಟೆಬಲ್ ಸಂತೋಷ್ ಕುಮಾರ್ ಅವರು ಮುದ್ದಮ್ಮ ಗಾರ್ಡನ್‍ನ 2ನೆ ಕ್ರಾಸ್‍ಗೆ ತೆರಳಿದ್ದಾರೆ. ಈ ರಸ್ತೆಯಲ್ಲಿ 8-10 ಮಂದಿ ಗುಂಪಾಗಿ ನಿಂತಿರುವುದನ್ನು ಗಮನಿಸಿ ಹೋಗಿದ್ದಾರೆ.

7 ಗಂಟೆಯಿಂದ ರಾತ್ರಿ ಕಫ್ರ್ಯೂ ಇರುವುದರಿಂದ ಯಾರೂ ರಸ್ತೆಯಲ್ಲಿ ನಿಲ್ಲಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ನಿಂತಿರುವುದನ್ನು ಕಾನ್‍ಸ್ಟೆಬಲ್ ಅವರು ಪ್ರಶ್ನಿಸಿ, ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಕಾನ್‍ಸ್ಟೆಬಲ್ ಜತೆ ವಾಗ್ವಾದ ನಡೆಸಿದ ಗುಂಪು ಅವರೊಂದಿಗೆ ಜಗಳವಾಡಿ ಅವರ ಕೈಯಿಂದ ಲಾಠಿ ಕಸಿದುಕೊಂಡು ತಳ್ಳಾಟ-ನೂಕಾಟ ನಡೆಸಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಕಾನ್ಸ್‍ಟೆಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶೋಧ ನಡೆಸಿ ಹಲ್ಲೆನಡೆಸಿದ್ದವರ ಪೈಕಿ ಮೂವರನ್ನು ಬಂಧಿಸಿದ್ದು, ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

Facebook Comments

Sri Raghav

Admin