3 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲು ಚಿಂತನೆ..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.24- ಸುಗಮ ಆಡಳಿತ ಹಾಗೂ ಭವಿಷ್ಯದಲ್ಲಿ ಯಾವುದೇ ರೀತಿಯ ಭಿನ್ನಮತ ಇಲ್ಲವೆ ಅಸಮಾಧಾನಕ್ಕೆ ಅವಕಾಶವಿಲ್ಲದಂತೆ ಎಚ್ಚರಿಕೆ ವಹಿಸಿರುವ ಬಿಜೆಪಿ ಮೂವರು ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸಲು ಮುಂದಾಗಿದೆ.

ನೆರೆಯ ಆಂಧ್ರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಜಾತಿ ಹಾಗೂ ಪ್ರದೇಶವಾರು ಆಧಾರದ ಮೇಲೆ ಐದು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿ ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ್ದರು.

ಇದೀಗ ಅದೇ ಮಾದರಿಯನ್ನು ಅನುಸರಿಸಲು ಮುಂದಾಗಿರುವ ದೆಹಲಿ ಬಿಜೆಪಿ ನಾಯಕರು ದಲಿತ, ಒಕ್ಕಲಿಗ ಮತ್ತು ಹಿಂದುಳಿದ ಸಮುದಾಯಗಳ ಮೂವರಿಗೆ ಡಿಸಿಎಂ ಹುದ್ದೆ ನೀಡುವ ಮೂಲಕ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಲು ಮುಂದಾಗಿದ್ದಾರೆ.

ಒಕ್ಕಲಿಗ ಸಮುದಾಯದಿಂದ ಆರ್.ಅಶೋಕ್ ಇಲ್ಲವೆ ಡಾ.ಸಿ.ಎನ್.ಅಶ್ವತ್ಥನಾರಾಯಣ್, ದಲಿತ ಸಮುದಾಯದಿಂದ ಗೋವಿಂದ ಕಾರಜೋಳ ಹಾಗೂ ಹಿಂದುಳಿದ ಸಮುದಾಯದಿಂದ ಕೆ.ಎಸ್.ಈಶ್ವರಪ್ಪ ಅವರಿಗೆ ಡಿಸಿಎಂ ಹುದ್ದೆ ಸಿಗಲಿದೆ ಎನ್ನಲಾಗುತ್ತಿದೆ.

ಈ ಹಿಂದೆ 2008ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದೇ ಮಾದರಿ ಅನುಸರಿಸಿತ್ತು. ಅಂದು ಒಕ್ಕಲಿಗ ಸಮುದಾಯದಿಂದ ಆರ್.ಅಶೋಕ್ ಹಾಗೂ ಹಿಂದುಳಿದ ಸಮುದಾಯದಿಂದ ಕೆ.ಎಸ್.ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು.
ಈಗ ಪಕ್ಷ ಮತ್ತು ಸರ್ಕಾರದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿರುವುದರಿಂದ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿ ಭಿನ್ನಮತಕ್ಕೆ ಅಂಕುಶ ಹಾಕಲು ವರಿಷ್ಠರು ಕಸರತ್ತು ನಡೆಸಿದ್ದಾರೆ.

ನಿನ್ನೆ ನವದೆಹಲಿಗೆ ತೆರಳಿದ ಸಿಎಂ ಬಿ.ಎಸ್.ಯಡಿಯೂರಪ್ಪ , ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ವೇಳೆ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

ನಿಮ್ಮದು ಅಲ್ಪಮತದ ಸರ್ಕಾರ. 17 ಶಾಸಕರು ಅನರ್ಹಗೊಂಡಿರುವುದರಿಂದ ಸರ್ಕಾರ ರಚನೆ ಮಾಡುವ ಅವಕಾಶ ಸಿಕ್ಕಿದೆ. ಈಗಾಗಲೇ ಸಚಿವ ಸ್ಥಾನ ಸಿಗದಿರುವವರು ಅಸಮಾಧಾನಗೊಂಡಿದ್ದಾರೆ. ಇದು ಮರುಕಳಿಸದಂತೆ ಎಚ್ಚರ ವಹಿಸಬೇಕು. ಹೀಗಾಗಿ ಮೂರು ಡಿಸಿಎಂ ಸ್ಥಾನ ಸೃಷ್ಟಿಸುವಂತೆ ಸಲಹೆ ಮಾಡಿದ್ದಾರೆ.

ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಸರ್ಕಾರದಲ್ಲಿ ಮತ್ತೊಂದು ರೀತಿಯ ಭಿನ್ನಮತಕ್ಕೆ ಅವಕಾಶವಾಗುತ್ತದೆ. ಪಕ್ಷದಲ್ಲಿ ಕೆಲವರು ಹಿರಿಯರಿದ್ದಾರೆ. ಅವರನ್ನು ಕಡೆಗಣಿಸಿ ಸ್ಥಾನ ನೀಡುವುದು ಅಷ್ಟು ಸಮಂಜಸವಲ್ಲ ಎಂದು ಯಡಿಯೂರಪ್ಪ ಮನವರಿಕೆ ಮಾಡಲು ಮುಂದಾದರು.

ಆದರೆ, ಇದನ್ನು ಒಪ್ಪದ ವರಿಷ್ಠರು ಭವಿಷ್ಯದಲ್ಲಿ ನಿಮ್ಮ ಸರ್ಕಾರಕ್ಕೆ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದೆಂದರೆ ನಾವು ನೀಡಿರುವ ಸಲಹೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿ. ಇದರಿಂದ ನಿಮಗೂ ಅನುಕೂಲವಾಗುತ್ತದೆ. ಸರ್ಕಾರದಲ್ಲಿ ಯಾವುದೇ ರೀತಿಯ ಕಿರಿಕಿರಿ ಇರುವುದಿಲ್ಲ ಎಂದು ಸೂಚಿಸಿದ್ದಾರೆ.

ಬಿಎಸ್‍ವೈಗೆ ಅಂಕುಶ: ಮೇಲ್ನೋಟಕ್ಕೆ ಸುಗಮ ಸರ್ಕಾರಕ್ಕಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗುತ್ತದೆ ಎಂದು ಹೇಳಿದರೂ ಬಿಎಸ್‍ವೈಗೆ ಪರೋಕ್ಷವಾಗಿ ಅಂಕುಶ ಹಾಕಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಯಡಿಯೂರಪ್ಪ ಅವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದಲೇ ಡಿಸಿಎಂ ಹುದ್ದೆ ಸೃಷ್ಟಿಸಲಾಗಿದೆ. ಈಗಾಗಲೇ ಪಕ್ಷದ ಅಧ್ಯಕ್ಷ ಸ್ಥಾನವನ್ನು ಸಂಘ ಪರಿವಾರದ ಹಿನ್ನೆಲೆಯುಳ್ಳವರಿಗೆ ನೀಡಲಾಗಿದೆ. ಸಂಪುಟ ವಿಸ್ತರಣೆಯಲ್ಲೂ ಹೈಕಮಾಂಡ್ ಬಿಎಸ್‍ವೈಗೆ ಪೂರ್ಣ ಸ್ವಾತಂತ್ರ್ಯ ನೀಡಿಲ್ಲ. ಈಗ ಡಿಸಿಎಂ ಹುದ್ದೆ ಸೃಷ್ಟಿಸುವ ಮೂಲಕ ಹಂತ ಹಂತವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿ ಹೈಕಮಾಂಡ್ ಇದೆ.

Facebook Comments

Sri Raghav

Admin