ಕಮಲ್‍ಹಾಸನ್ ಅಭಿನಯದ ಇಂಡಿಯನ್-2 ಚಿತ್ರದ ಶೂಟಿಂಗ್ ವೇಳೆ ಕ್ರೇನ್ ಕುಸಿದು ಮೂವರ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಫೆ.20- ಹಿರಿಯ ನಟ ಕಮಲ್‍ಹಾಸನ್ ಅಭಿನಯದ ಮತ್ತು ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಇಂಡಿಯನ್-2 ಚಿತ್ರದ ಚಿತ್ರೀಕರಣ ವೇಳೆ ಭೀಕರ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಸಹಾಯಕ ನಿರ್ದೇಶಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಇನ್ನಿಬ್ಬರ ಸ್ಥಿತಿ ಶೋಚನೀಯವಾಗಿದೆ.

ಚೆನ್ನೈನಲ್ಲಿರುವ ಇವಿಪಿ ಫಿಲ್ಮ್‍ಸಿಟಿಯಲ್ಲಿ ನಿನ್ನೆ ರಾತ್ರಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ಬಳಸಲಾಗುತ್ತಿದ್ದ ಕ್ರೇನ್ ಉರುಳು ಬಿತ್ತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಇಂಡಿಯನ್-2 ಚಿತ್ರದ ಚಿತ್ರೀಕರಣಕ್ಕಾಗಿ ಸೆಟ್ ಸಜ್ಜುಗೊಳಿಸಲು ಕ್ರೇನ್ ಬಳಸಲಾಗುತ್ತಿತ್ತು. ಈ ವೇಳೆ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸಿಬ್ಬಂದಿಗಳಿಗೆ ಆಹಾರ ಸರಬರಾಜು ಮಾಡುತ್ತಿದ್ದ ಮಧು (29), ಚಂದ್ರನ್ (60) ಮತ್ತು ಸಹಾಯಕ ನಿರ್ದೇಶಕ ಕೃಷ್ಣಾ (34) ಎಂದು ಗುರುತಿಸಲಾಗಿದೆ.

ಗಾಯಾಳುಗಳು: ಮಂಚಂಗ್ (37), ವಾಸು (35), ರಂಜಾನ್ (43), ಅರುಣ್‍ಪ್ರಸತ್ (24), ಕುಮಾರ್ (52), ಕಲೈಚಿತ್ರ, ಗುಣಬಾಲನ್, ತಿರುನಾವುಕ್ಕರಸು (35) ಮತ್ತು ಮುರುಗದಾಸ್ (40) ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ನಿರ್ದೇಶಕ ಶಂಕರ್ ಮತ್ತು ಚಿತ್ರ ನಿರ್ಮಾಪಕರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಮಲ್‍ಹಾಸನ್ ಕಂಬನಿ: ದುರ್ಘಟನೆ ಬಗ್ಗೆ ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿರುವ ಹಿರಿಯ ನಟ ಮತ್ತು ಎಂಎನ್‍ಎಂ ಪಕ್ಷದ ನಾಯಕ ಕಮಲ್‍ಹಾಸನ್ ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.
ಸಾವು-ನೋವಿನ ಬಗ್ಗೆ ಕಂಬನಿ ಮಿಡಿದಿರುವ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ಅಗತ್ಯವಾದ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಹೈ ವೋಲ್ಟೇಜ್ ಸೂಪರ್ ಹಿಟ್ ಇಂಡಿಯನ್ ಚಿತ್ರದ ಮುಂದುವರಿದ ಭಾಗದ ಈ ಸಿನಿಮಾ ಅಭಿಮಾನಿಗಳಲ್ಲಿ ಬಹುನಿರೀಕ್ಷೆ ಮೂಡಿಸಿದ್ದು, ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆ ಬಗ್ಗೆ ಚಿತ್ರರಂಗ ದಿಗ್ಭ್ರಮೆ ವ್ಯಕ್ತಪಡಿಸಿದೆ.

Facebook Comments

Sri Raghav

Admin