ಹಿಂದಿನಿಂದ ಬಂದು ಕಾರಿಗೆ ಗುದ್ದಿದ ಲಾರಿ, ಒಂದೇ ಕುಟುಂಬದ ಮೂವರ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ,ಸೆ.15- ಹೈದರಾಬಾದ್ ಕಡೆಗೆ ಹೋಗುತ್ತಿದ್ದ ಕಾರಿಗೆ ಅದೇ ಮಾರ್ಗವಾಗಿ ಹಿಂದಿನಿಂದ ಅತಿವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುವಾಗಿ ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನಜಾವ ಸಂಭವಿಸಿದೆ.

ಹೈದರಾಬದ್ ಮೂಲದ ಜಯಶ್ರೀ(50), ಅಕ್ಷಯ್(28), ಹರ್ಷ(24) ಮೃತಪಟ್ಟ ದುರ್ದೈವಿಗಳು. ಅಪಘಾತದಲ್ಲಿ ದಿನೇಶ್ (50) ಎಂಬುವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ಜಿಗಣಿ ಸಮೀಪ ಮಾರ್ಬಲ್ ಶೋ ರೂಂ ನಡೆಸುತ್ತಿರುವ ದಿನೇಶ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಹೈದರಾಬಾದ್‍ಗೆ ಕಾರಿನಲ್ಲಿ ತೆರಳುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ 7, ಚಿಕ್ಕಬಳ್ಳಾಪುರ ತಾಲ್ಲೂಕಿನ ಚಿಕ್ಕಪೇಲಗುರ್ಕಿ ಬಳಿ ಹೋಗುತ್ತಿದ್ದಾಗ ಹಂಪ್ಸ್ ಇದ್ದ ಕಾರಣ ಕಾರು ನಿಧಾನವಾಗಿ ಚಲಿಸುತ್ತಿದ್ದಂತೆ ಹಿಂದಿನಿಂದ ಅತಿವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಿನೇಶ್ ಎಂಬುವರು ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಶೋಧ ಕೈಗೊಂಡಿದ್ದಾರೆ.

# ಪದೇ ಪದೇ ಅಪಘಾತ:
ರಾಷ್ಟ್ರೀಯ ಹೆದ್ದಾರಿ 7ರ ಬಳಿ ಇರುವ ಹಂಪ್ ಸಮೀಪ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಈ ಜಾಗದಲ್ಲಿ ಹಂಪ್ಸ್ ಇರುವುದು ಗೊತ್ತಾಗದೆ ವೇಗವಾಗಿ ಚಾಲನೆ ಮಾಡಿಕೊಂಡು ಬರುವಾಗ ಅಪಘಾತವಾಗಿ ಸಾವುನೋವು ಸಂಭವಿಸುತ್ತಿರುವುದರಿಂದ ಈ ಜಾಗದಲ್ಲಿ ಬೀದಿದೀಪ ಅಳವಡಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

Facebook Comments

Sri Raghav

Admin