ಹಂದಿ ಕದಿಯಲು ಬಂದು 3 ಮಂದಿಯನ್ನು ಕೊಂದ ದುಷ್ಕರ್ಮಿಗಳು..!
ಚಿತ್ರದುರ್ಗ, ಆ.17- ಹಂದಿ ಸಾಕಾಣೆ ಮಾಡುತ್ತಿದ್ದ ಮೂವರ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಮಾರೇಶ್ (50), ಯಲ್ಲೇಶ (30) ಮತ್ತು ಸೀನಪ್ಪ (30) ಕೊಲೆಯಾಗಿರುವ ದುರ್ದೈವಿಗಳು. ಮೃತರು ಹಂದಿ ಸಾಕಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದು ಕಳೆದ ರಾತ್ರಿ ಯಾರೋ ದುಷ್ಕರ್ಮಿಗಳು ಹಂದಿಗಳನ್ನು ಕದಿಯಲು ಬಂದಿದ್ದು ಆ ವೇಳೆ ಇವರು ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಅವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ನಾಯಕನಹಟ್ಟಿ ಹೊರವಲಯದಲ್ಲಿರುವ ಹಂದಿ ಸಾಕಣೆ ಗುಡಿಸಲಿಗೆ ಏಕಾಏಕಿ ನುಗ್ಗಿದ್ದಾರೆ. ನಂತರ ಗುಡಿಸಲಿನ ಬಳಿ ಮಲಗಿದ್ದ ಮಾರೇಶನ ತಲೆ ಕಡಿದು ಕೊಲೆಗೈದಿದ್ದಾರೆ. ತಲೆ ಇಲ್ಲದ ದೇಹ ಮಾತ್ರ ಸ್ಥಳದಲ್ಲಿ ಪತ್ತೆಯಾಗಿದ್ದು, ಶಿರ ನಾಪತ್ತೆಯಾಗಿದೆ. ಈ ವೇಳೆ ತಂದೆಯೊಂದಿಗಿದ್ದ ಮಗ ಸೀನಪ್ಪ ಹಾಗೂ ಅಣ್ಣನ ಮಗನಾದ ಯಲ್ಲೇಶನ ಕಣ್ಣಿಗಳಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರ ಹಾಗೂ ಕಲ್ಲಿನಿಂದ ಕೊಲೆಗೈದಿದ್ದಾರೆ.
ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಯಲ್ಲೇಶ್ ಗುಡಿಸಲಿನಿಂದ ದೂರ ಓಡಿಹೋಗಿದ್ದಾನೆ. ಆಗ ರಸ್ತೆ ಬದಿಯಲ್ಲೇ ಆತನನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ. ಮೂವರನ್ನು ಕೊಂದ ಬಳಿಕ 40ಕ್ಕೂ ಹೆಚ್ಚು ಹಂದಿಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನಾ ಸ್ಥಳದಲ್ಲಿ ಕಣ್ಣೀರು ಹಾಕುತ್ತಾ, ಪತಿ ಮತ್ತು ಮಕ್ಕಳನ್ನು ಕೊಂದವರನ್ನು ತುಂಡಾಗಿ ಕತ್ತರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ಹಾಗೂ ಎಎಸ್ಪಿ ನಂದಗಾವಿ ಸೇರಿದಂತೆ ನಾಹಕನಹಟ್ಟಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಸ್ಥಳದಲ್ಲಿ ಶ್ವಾನದಳ, ಬೆರಳಚ್ಚು ತಜ್ಞರ ತಂಡದೊಂದಿಗೆ ತನಿಖೆ ಮುಂದುವರಿಸಿದ್ದಾರೆ. ಮೃತರ ಸಂಬಂಧಿಗಳ ಹೇಳಿಕೆ ಪಡೆದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ಕೃತ್ಯದಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಮಾರೇಶ್, ಯಲ್ಲೇಶ ಮತ್ತು ಸೀನಪ್ಪ ಅವರ ಕೊಲೆಯಿಂದಾಗಿ ಅವರ ಸಂಬಂಧಿಕರ ರೋಧನ ಗಗನಮುಟ್ಟಿತ್ತು.