ಗಣಿಯೊಳಗೆ ಇಳಿಯಲು ಯತ್ನಿಸಿದ ಮೂವರು ಉಸಿರುಗಟ್ಟಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಮೇ 14-ಬಂದ್ ಮಾಡಲಾಗಿದ್ದ ಮಾರಿಕುಪ್ಪಂನ ಬಿಜಿಎಂಎಲ್‍ನ ಎನ್.ಕಾಕ್, ಗಣಿಯೊಳಗೆ ಇಳಿಯಲು ಯತ್ನಿಸಿದ ಮೂವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಂಡರ್‍ಸನ್ ಪೇಟೆಯ ನಿವಾಸಿಗಳಾದ ಕಂದ (55), ಜೋಸೆಫ್ (45) ಹಾಗೂ ಸಂತೋಷ್ ಪಡಿಯಪ್ಪ (23) ಮೃತಪಟ್ಟ ವ್ಯಕ್ತಿಗಳು.

ಕಳೆದ ರಾತ್ರಿ ಸುಮಾರು ಐದು ಜನರ ತಂಡ ಗಣಿಯೊಳಗೆ ಪ್ರವೇಶಿಸಿ ಸುಮಾರು 700 ರಿಂದ 800 ಅಡಿ ಆಳದ ಟನಲ್‍ಗೆ ಕಂದ, ಜೋಸೆಫ್ ಹಾಗೂ ಮತ್ತೊಬ್ಬ ಇಳಿದಿದ್ದಾರೆ. ಈ ವೇಳೆ ಉಸಿರಾಟಕ್ಕೆ ತೊಂದರೆ ಯಾಗಿದೆ.

ಕೊನೆಯಲ್ಲಿ ಉಳಿದ ವ್ಯಕ್ತಿ ವಾಪಸ್ ಬಂದು ಕಂದನ ಮಗನಿಗೆ ಸುದ್ದಿ ತಿಳಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಸಂತೋಷ್ ಪಡಿಯಪ್ಪ ಅಪ್ಪನನ್ನು ರಕ್ಷಿಸಲು ಹೋಗಿ ತಾನೂ ಟನಲ್‍ಗೆ ಇಳಿದಾಗ ಉಸಿರುಗಟ್ಟಿ ಮೂವರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಗುರುಲಿಂಗಯ್ಯ, ಪುಟ್ಟಯ್ಯ ಹಾಗೂ ರಾಘವೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಸಿದ್ದಾರೆ. ಮತ್ತೊಬ್ಬನ ಶವಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ.

ಗಣಿಯಲ್ಲಿ ಸಿಗುವ ಚಿನ್ನದ ಅದಿರು ಮತ್ತು ಕಬ್ಬಿಣ ಕಳ್ಳತನಕ್ಕಾಗಿ ಗಣಿಯೊಳಗೆ ಇಳಿದಿರಬಹುದೆಂದು ಶಂಕಿಸಲಾಗಿದೆ. ಮಾರಿಕುಪ್ಪಂ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin