ಚಾಮುಂಡಿ ಬೆಟ್ಟ ಟಿಕೆಟ್ ಅವ್ಯವಹಾರ ಮೂವರು ಸಿಬ್ಬಂದಿ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

Chamundi-Temple--01
ಮೈಸೂರು, ಸೆ.17- ಚಾಮುಂಡಿಬೆಟ್ಟ ದೇವಸ್ಥಾನದ ಗಣಕೀಕೃತ ಟಿಕೆಟ್ ವ್ಯವಸ್ಥೆಯಲ್ಲಿ 6.79 ಲಕ್ಷ ರೂ. ಅವ್ಯವಹಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ದೇವಸ್ಥಾನದ ಪಾರುಪತ್ತೇದಾರ ಎಂ. ಡಿ. ರಾಜು, ಸಿಬ್ಬಂದಿ ಪ್ರಕಾಶ್ ಹಾಗೂ ಆನಂದ್ ಸೇವೆಯಿಂದ ಅಮಾನತುಗೊಂಡವರು. ಈ ಮೂವರು ದೇವಸ್ಥಾನದ 50 ಹಾಗೂ 30 ರೂ. ಮುಖಬೆಲೆಯ ಟಿಕೆಟ್ ನೀಡುವಲ್ಲಿ ಅವ್ಯವಹಾರ ನಡೆಸಿರುವ ಶಂಕೆ ಇದೆ ಎಂದಿರುವ ಚಾಮುಂಡೇಶ್ವರಿ ದೇವಸ್ಥಾನದ ಇಒ ಕೆ ಎಂ ಪ್ರಸಾದ್ ಅವರು, 6.79 ಲಕ್ಷ ರೂ. ಗೆ ಲೆಕ್ಕ ಸಿಗದ ಹಿನ್ನೆಲೆಯಲ್ಲಿ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.

ಈ ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಕೋರಲಾಗಿದೆ. ಅವರ ಒಪ್ಪಿಗೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಬೆಂಗಳೂರಿನ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‍ಐಸಿ)ಕ್ಕೆ ಟಿಕೆಟ್ ಪರಿಶೀಲನೆ ನಡೆಸುವಂತೆ ಪತ್ರ ಬರೆಯಲಾಗಿದೆ. ಪರಿಶೀಲನೆ ನಂತರ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಇಒ ಪ್ರಸಾದ್ ಹೇಳಿದ್ದಾರೆ. ಚಾಮುಂಡಿಬೆಟ್ಟದಲ್ಲಿ ದೇವಿಯ ದರ್ಶನಕ್ಕೆ ನೀಡುವ ಟಿಕೆಟ್‍ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಈ ಸಂಜೆ ಇತ್ತೀಚೆಗೆ ಸಮಗ್ರ ವರದಿ ಪ್ರಕಟಿಸಿತ್ತು.

Facebook Comments

Sri Raghav

Admin