ಎನ್‌ಕೌಂಟರ್‌ನಲ್ಲಿ 3 ಉಗ್ರರು ಖತಂ, ಮಹಿಳೆ ಬಲಿ, ಯೋಧರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಸೆ.17-ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಪ್ರೇರಿತ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದ್ದು, ಅವರನ್ನು ನಿಗ್ರಹಿಸುವ ಸೇನಾ ಕಾರ್ಯಾಚರಣೆಯೂ ಬಿರುಸಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಬಟಮಲೂ ಪ್ರದೇಶದಲ್ಲಿ ಬೆಳಗಿನ ಜಾವ ಯೋದರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ.

ಮೃತ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಎನ್‍ಕೌಂಟರ್‍ನಲ್ಲಿ ಸಿಆರ್‍ಪಿಎಫ್‍ನ ಕೆಲವು ಯೋಧರಿಗೆ ಗಾಯಗಳಾಗಿವೆ.

ಬಟಮೂಲ ಪ್ರದೇಶದ ಫಿರ್ದೌಸಾಬಾದ್ ಬಡಾವಣೆಯಲ್ಲಿ ಉಗ್ರಗಾಮಿಗಳು ಅವಿತ್ತಿಟ್ಟುಕೊಂಡಿದ್ದಾರೆ ಎಂದ ಖಚಿತ ಸುಳಿವಿನ ಮೇರೆಗೆ ನಿನ್ನೆ ಮಧ್ಯರಾತ್ರಿಯಿಂದಲೇ ಯೋಧರು ಆ ಸ್ಥಳವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.

ಇದೇ ಸಂದರ್ಭದಲ್ಲಿ ಉಗ್ರಗಾಮಿಗಳು ಯೋಧರ ಮೇಲೆ ಗುಂಡು ಹಾರಿಸಿದಾಗ ಗನ್‍ಫೈಟ್ ನಡೆಯಿತು. ಎನ್‍ಕೌಂಟರ್‍ನಲ್ಲಿ ಮೂವರು ಭಯೋತ್ಪಾದಕರು ಹತರಾದರು. ಅವರ ಬಳಿಯಿಂದ ಎಕೆ-47 ರೈಫಲ್‍ಗಳು, ಬುಲೆಟ್‍ಗಳು, ಪಿಸ್ತೂಲ್‍ಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗುಂಡಿನ ಚಕಮಕಿ ವೇಳೆ, ಕೌನ್ಸರ್ ರಿಯಾಜ್ ಎಂಬ ಮಹಿಳೆ ಮೃತಪಟ್ಟಿದ್ದು, ಸಿಆರ್‍ಪಿಎಫ್‍ನ ಕೆಲವು ಯೋಧರಿಗೆ ಗಾಯಗಳಾಗಿವೆ. ಗಾಯಾಳು ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

Facebook Comments