ಕೊನೆಗೂ ಬದುಕಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗು..!

ಈ ಸುದ್ದಿಯನ್ನು ಶೇರ್ ಮಾಡಿ

ಮೆಡಕ್ (ತೆಲಂಗಾಣ), ಮೇ 28-ತೆರೆದ ಕೊಳವೆ ಬಾವಿಗಳಿಗೆ ಬಿದ್ದು ಮಕ್ಕಳು ಸಾವಿಗೀಡಾಗುತ್ತಿರುವ ಪ್ರಕರಣಗಳು ಮುಂದುವರಿದಿದೆ. ತೆಲಂಗಾಣದ ಮೆಡಕ್ ಪಾಪಣ್ಣ ಪೆಟ್ ತಾಲ್ಲೂಕಿನ ಪೊಡನಂಪಲ್ಲಿ ಗ್ರಾಮದಲ್ಲಿ ಪಾಳು ಬಿದ್ದ ಕೊಳವೆ ಬಾವಿ ಮೂರು ವರ್ಷದ ಮಗುವನ್ನು ಬಲಿ ತೆಗೆದುಕೊಂಡಿದೆ.

ಆಟವಾಡುತ್ತಿದ್ದ ಮಗು ಕಾಲು ಜಾರಿ 120 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಉಸಿರುಗಟ್ಟಿ ಅಸು ನೀಗಿದೆ. ಇಂದು ನಸುಕಿನಲ್ಲಿ ಸಾಯಿ ವರ್ಧನ್ ಎಂಬ ಮಗುವಿನ ಶವವನ್ನು ಹೊರಕ್ಕೆ ತೆಗೆಯಲಾಗಿದೆ.

ಹೈದರಾಬಾದ್ ಮತ್ತು ಗುಂಟೂರಿನಿಂದ ಘಟನಾ ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ (ಎನ್‍ಡಿಆರ್‍ಎಫ್)ದ 25ಕ್ಕೂ ಹೆಚ್ಚು ಸಿಬ್ಬಂದಿ ಸತತ 12 ತಾಸುಗಳ ಕಾಲ ಮಗು ರಕ್ಷಣೆಗಾಗಿ ನಡೆಸಿದ ಕಾರ್ಯಾಚರಣೆ ಫಲ ನೀಡಲಿಲ್ಲ. ಕೊಳವೆ ಬಾವಿಯಲ್ಲಿ 25 ಅಡಿಗಳಷ್ಟು ಆಳದಲ್ಲಿ ಸಿಲುಕಿದ್ದ ಮಗು ಉಸಿರುಗಟ್ಟಿ ಮೃತಪಟ್ಟಿದ್ದು, ಶವವನ್ನು ಹೊರಕ್ಕೆ ತೆಗೆಯಲಾಗಿದೆ.

ಜಮೀನಿನಲ್ಲಿ ಬೋರ್‍ವೆಲ್ ಕೊರೆಸಿ ಮುಚ್ಚದೆ ಹಾಗೆ ಬಿಟ್ಟಿದ್ದ ಮಾಲೀಕ ಮಂಗಲಿ ಭಿಕ್ಷಾಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರು ಮಗುವಿನ ತಾತ.  ಮಂಗಲಿ ಭಿಕ್ಷಾಪತಿ ತಮ್ಮ ಜಮೀನಿನಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದರು. ಮೊನ್ನೆ ಸಹ ಮತ್ತೊಂದು ಬೋರ್‍ವೆಲ್ ತೆಗೆಸಿದ್ದರು. ಆದರೆ ನೀರು ಲಭಿಸದ ಕಾರಣ ಅದನ್ನು ಮುಚ್ಚಲಿಲ್ಲ.

ಹೊಲದಲ್ಲಿ ತೋಟದ ಮನೆಯಲ್ಲಿ ಗೋವರ್ಧನ್ ಮತ್ತು ನವೀನಾ ದಂಪತಿ ಸಾಯಿ ವರ್ಧನ್ ಮತ್ತು ಇನ್ನಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ನಿನ್ನೆ ಸಂಜೆ ದಂಪತಿ ಮಗುವಿನೊಂದಿಗೆ ಹೊಲದಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಕಾಲು ಜಾರಿ ಕೊಳವೆ ಬಾವಿಗೆ ಬಿತ್ತು.

ತಂದೆ ಮತ್ತು ತಾಯಿ ಮಗುವಿನ ರಕ್ಷಣೆಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಎನ್‍ಡಿಆರ್‍ಎಫ್ ಸಿಬ್ಬಂದಿ 12 ತಾಸುಗಳ ನಿರಂತರ ಕಾರ್ಯಾಚರಣೆ ನಡೆಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

Facebook Comments