ನೀಟ್ ತರಬೇತಿ ಕೇಂದ್ರಗಳ ಮೇಲೆ ದಾಳಿ, 30 ಕೋಟಿ ರೂ.ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, : ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್) ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 30 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ತೆರಿಗೆ ವಂಚನೆ ಹಣವನ್ನು ಪತ್ತೆ ಮಾಡಿದ್ದಾರೆ. ಚೆನ್ನೈ ಸೇರಿದಂತೆ ತಮಿಳುನಾಡಿನ 17ಕ್ಕೂ ಹೆಚ್ಚು ಸ್ಥಳಗಳಲ್ಲಿ ನಿನ್ನೆಯಿಂದ ಏಕಕಾಲದಲ್ಲಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು 30 ಕೋಟಿ ರೂ.ಗಳ ತೆರಿಗೆ ವಂಚನೆ ಹಣವನ್ನು ವಶ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮುಂದುವರೆಸಲಾಗಿದೆ.

ಮತ್ತಷ್ಟು ಅಕ್ರಮಗಳು ಬಯಲಾಗುವ ನಿರೀಕ್ಷೆ ಇದೆ.  ನೀಟ್ ಪರೀಕ್ಷೆ ತರಬೇತಿಗಾಗಿ ವಿದ್ಯಾರ್ಥಿಗಳಿಂದ ಭಾರೀ ಮೊತ್ತದ ಹಣವನ್ನು ಪಡೆಯುತ್ತಿದ್ದ ಈ ತರಬೇತಿ ಸಂಸ್ಥೆಗಳು ಮತ್ತು ಕೇಂದ್ರಗಳು ರಸೀದಿ ನೀಡದೆ ತೆರಿಗೆ ಹಣವನ್ನು ವಂಚಿಸಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ಸೇರಿದಂತೆ ವಿವಿಧ ನಗರಗಳಲ್ಲಿನ ನೀಟ್ ಪರೀಕ್ಷಾ ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಪುಸ್ತಕಗಳನ್ನು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದಾಗ ಭಾರೀ ಮೊತ್ತದ ತೆರಿಗೆ ವಂಚನೆ ಪತ್ತೆಯಾಗಿದ್ದು, ಹಣವನ್ನು ವಶಪಡಿಸಿಕೊಳ್ಳಲಾಗಿದೆ ಅವರು ಮಾಹಿತಿ ನೀಡಿದ್ದಾರೆ. ಈ ಸಂಸ್ಥೆಗಳನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಬೇನಾಮಿ ಹೆಸರಿನಲ್ಲಿ ನಡೆಸುತ್ತಿರುವುದು ಸಹ ಪತ್ತೆಯಾಗಿದೆ. ಅಲ್ಲದೆ, ಸಮೂಹ ಸಂಸ್ಥೆಗಳ ಹೆಸರಿನಲ್ಲೂ ಇಂತಹ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.

ವೈದ್ಯರಾಗುವ ಉದ್ದೇಶದಿಂದ ನೀಟ್ ಪರೀಕ್ಷೆ ಎದುರಿಸಬೇಕಾದ ವಿದ್ಯಾರ್ಥಿಗಳಿಂದ ತರಬೇತಿಗಾಗಿ ಭಾರೀ ಹಣವನ್ನು ಈ ಕೇಂದ್ರಗಳು ವಸೂಲಿ ಮಾಡುತ್ತಿದ್ದವು. ಆದರೆ ಇವುಗಳಿಗೆ ರಸೀದಿ ಕೊಡದೆ ಅಲ್ಪ ಮೊತ್ತವನ್ನು ನಮೂದಿಸಿ ಬಿಲ್‍ಗಳನ್ನು ನೀಡಲಾಗುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ದಾಳಿ ವೇಳೆ ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೆಲವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಈ ನೀಟ್ ಪರೀಕ್ಷಾ ತರಬೇತಿ ಮಾಫಿಯಾ ಹಿಂದೆ ಮತ್ತಷ್ಟು ಕಾಣದ ಕೈಗಳು ಕಾರ್ಯನಿರ್ವಹಿಸುತ್ತಿರುವ ಶಂಕೆ ಇದ್ದು, ತನಿಖೆ ಮತ್ತಷ್ಟು ತೀವ್ರಗೊಂಡಿದೆ.

Facebook Comments