34 ಬಾರಿ ವಿಷಸರ್ಪಗಳು ಕಚ್ಚಿದರೂ ಬದುಕುಳಿದ ‘ನಾಗಕನ್ಯೆ’ !

ಈ ಸುದ್ದಿಯನ್ನು ಶೇರ್ ಮಾಡಿ

Snake-Girl--01

ಸಿರಾಮೌರ್, (ಹಿಮಾಚಲ ಪ್ರದೇಶ), ಫೆ.22-ಸರ್ಪವನ್ನು ಕನಸಿನಲ್ಲಿ ಕಂಡರೂ ಅನೇಕರು ಬೆಚ್ಚಿ ಬೀಳುತ್ತಾರೆ.. ಹೌಹಾರುತ್ತಾರೆ. ವಿಷಪೂರಿತ ಸರ್ಪ ಒಮ್ಮೆ ಕಚ್ಚಿತೆಂದರೆ ಸಾವು ಖಚಿತ. ಆದರೆ ಹಿಮಾಚಲ ಪ್ರದೇಶದ ಯುವತಿಯೊಬ್ಬಳಿಗೆ ಕಳೆದ ಮೂರು ವರ್ಷಗಳಿಂದ 34 ಬಾರಿ ಉರುಗಗಳು ದಾಳಿ ನಡೆಸಿದ್ದರೂ ಬದುಕುಳಿದು ಅಚ್ಚರಿ ಮೂಡಿಸಿದ್ದಾಳೆ. ಇದು ವೈದ್ಯಲೋಕಕ್ಕೆ ಸವಾಲಾಗಿದ್ದು, ಈ ವಾರ್ತೆಯ ಸುತ್ತ ಅನೇಕ ಕಟ್ಟುಕಥೆಗಳೂ ಹುಟ್ಟಿಕೊಂಡಿವೆ.   ಮೋನಿಷಾ-ಹಿಮಾಚಲ ಪ್ರದೇಶದ ಸಿರಾಮೌರ್ ಗ್ರಾಮದ 18 ವರ್ಷದ ಯುವತಿ. ಕಳೆದ ಮೂರು ವರ್ಷಗಳಿಂದ 30ಕ್ಕೂ ಹೆಚ್ಚು ಬಾರಿ ಸರ್ಪಗಳು ಈಕೆಯ ಮೇಲೆ ದಾಳಿ ನಡೆಸಿ ಕಚ್ಚಿವೆ. ದೇಹದ ವಿವಿಧ ಭಾಗಗಳ ಮೇಲೆ ಹಾವು ಕಚ್ಚಿರುವ ಗುರುತುಗಳಿವೆ. ಆದರೂ ಈಕೆ ಸಾವಿನ ದವಡೆಯಿಂದ ಪಾರಾಗಿರುವುದು ದೊಡ್ಡ ಸುದ್ದಿಯಾಗಿದೆ.

ನಾನು ಚಿಕ್ಕವಳಿದ್ದಾಗ ನನ್ನ ಹಳ್ಳಿಯ ಕೆರೆಯೊಂದರಲ್ಲಿ ಬಿಳಿ ಹಾವೊಂದು ನನ್ನನ್ನು ಕಚ್ಚಿತು. ಆಗಿನಿಂದಲೂ ಹಾವುಗಳು ನನಗೆ ಕಚ್ಚುತ್ತಲೇ ಇವೆ. ಮೂರು ವರ್ಷಗಳಿಂದ 34 ಬಾರಿ ನಾನು ಸರ್ಪಗಳ ದಾಳಿಗೆ ಒಳಗಾಗಿದ್ದೇನೆ. ಶಾಲೆಯ ದಿನಗಳಲ್ಲಿ ನನಗೆ ಹೆಚ್ಚಾಗಿ ಇಂಥ ಅನುಭವವಾಗಿದೆ. ಒಂದೇ ದಿನ ಅದೇ ಹಾವು ಎರಡು ಅಥವಾ ಮೂರು ಬಾರಿ ನನಗೆ ಕಚ್ಚಿದೆ. ಅದನ್ನು ನೋಡಿದಾಗಲೆಲ್ಲ ನಾನು ಮಂತ್ರಮುಗ್ಧಗೊಳ್ಳುತ್ತೇನೆ ಎಂದು ಮೋನಿಷಾ ತನಗಾಗುತ್ತಿರುವ ಅನುಭವಗಳನ್ನು ವಿವರಿಸಿದ್ದಾಳೆ.   ಆಕೆಯ ತಂದೆ ವರ್ಮ ಹೇಳುವಂತೆ ಹಾವು ಕಚ್ಚುವುದು ಆಕೆಗೆ ಮಾಮೂಲಿ ಸಂಗತಿಯಾಗಿದೆ. ಮೊದಲು ನಮಗೆ ತುಂಬಾ ಗಾಬರಿ-ಆತಂಕವಾಗಿತ್ತು. ಇಷ್ಟು ಬಾರಿ ಹಾವು ಕಚ್ಚಿದರೂ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದು ದೈವಲೀಲೆ ಎಂದೇ ನಾವು ನಂಬಿದ್ದೇವೆ ಎನ್ನುತ್ತಾರೆ.

ಮೋನಿಷಾಳನ್ನು ಜ್ಯೋತಿಷಿಗಳ ಬಳಿ ಕರೆದೊಯ್ಡು ಈ ವಿಸ್ಮಯ ಘಟನೆಗಳ ಬಗ್ಗೆ ವಿವರಿಸಿ ಪರಿಹಾರ ಪಡೆಯಲು ಯತ್ನಿಸಲಾಗಿದೆ. ಸರ್ಪಕ್ಕೂ ಈ ಹುಡುಗಿಗೂ ಪೂರ್ವಜನ್ಮದಲ್ಲಿ ಏನೋ ಸಂಬಂಧವಿದೆ. ಆದಕ್ಕಾಗಿ ಈ ಜನ್ಮದಲ್ಲಿ ಈ ರೀತಿ ಘಟನೆ ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಈಕೆ ಬಗ್ಗೆ ಅನೇಕ ಕಟ್ಟುಕಥೆಗಳು ಸೃಷ್ಟಿಯಾಗಿವೆ. ಮೋನಿಷಾ ನಾಗಕನ್ಯೆ ಎಂದೂ, ಈಕೆ ನಾಗಲೋಕದಿಂದ ಬಂದವಳೆಂದು ಊಹಾಪೋಹಗಳು ಹಬ್ಬಿವೆ.   ಈಕೆಯ ಮೇಲೆ ದಾಳಿ ನಡೆಸಲು ಕೆಲಕಾಲ ವಿರಾಮ ನೀಡಿದ್ದ ಸರ್ಪ ಫೆಬ್ರವರಿ 18ರಂದು ಮತ್ತೆ ಕಚ್ಚಿದೆ. ಡಾ. ವೈ.ಎಸ್. ಪರ್ಮರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈಕೆಗೆ ಚಿಕಿತ್ಸೆ ನೀಡಲಾಯಿತು. ಈಕೆಗೆ ಕಚ್ಚಿರುವ ಹಾವು ವಿಷಪೂರಿತ ಜಂತುವಲ್ಲ. ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈಕೆಯ ಮೈಮೇಲೆ ಆಗಿರುವ ಗಾಯಗಳನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಕೆ. ಪ್ರಶಾರ್ ಪರಿಶೀಲಿಸಿದ್ದಾರೆ. ಹಾವುಗಳಲ್ಲಿ ಶೇಕಡ 80ರಷ್ಟು ವಿಷಪೂರಿತವಲ್ಲ. ಮೋನಿಷಾಳಿಗೆ ಕಚ್ಚಿರುವ ಹಾವುಗಳು ಬಹುಶಃ ಇದೇ ಜಾತಿಗೆ ಸೇರಿರಬೇಕು. ಇಷ್ಟು ಬಾರಿಗೆ ಈಕೆಗೆ ಹಾವು ಕಚ್ಚಿರುವುದು ಅಚ್ಚರಿಯ ಸಂಗತಿ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin