ಬಿಗ್ ಬ್ರೇಕಿಂಗ್ : ರಾಜ್ಯದಲ್ಲಿ ಒಂದೇ ದಿನ 34 ಮಂದಿಗೆ ಕೊರೋನಾ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.16- ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 313ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 15 ಮಹಿಳೆಯರು ಸೇರಿದಂತೆ 34ಕ್ಕೂ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೂ ಸೋಂಕಿಗೆ 13 ಮಂದಿ ಮೃತಪಟ್ಟಿದ್ದರೆ, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 82 ಮಂದಿ ರೋಗ ಮುಕ್ತರಾಗಿ ಮನೆಗಳಿಗೆ ತೆರಳಿದ್ದಾರೆ. ಆದರೂ ಪ್ರತಿ ನಿತ್ಯ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಬಿಬಿಎಂಪಿ ವ್ಯಾಪ್ತಿಯ 13 ವರ್ಷದ ಬಾಲಕ, 37 ಹಾಗೂ 43 ವರ್ಷದ ಪುರುಷರು ಮತ್ತು 54 ವರ್ಷದ ಮಹಿಳೆ ಹಾಗೂ 65 ವರ್ಷದ ವೃದ್ದೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಗಡಿನಾಡು ಬೆಳಗಾವಿ ಕೊರೊನಾ ಹಾಟ್‍ಸ್ಪಾಟ್ ಆಗಿ ಪರಿವರ್ತನೆಗೊಂಡಿದ್ದು, ನಿನ್ನೆ ಸಂಜೆ ಇಂದೀಚೆಗೆ ಇಲ್ಲಿಯವರೆಗೂ 17 ಹೊಸ ಕೊರೊನಾ ಕೇಸ್‍ಗಳು ದೃಢಪಟ್ಟಿವೆ.

ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ 7 ಪ್ರಕರಣಗಳು ದೃಢಪಟ್ಟಿದ್ದರೆ, ಬಾಗೇವಾಡಿ, ಚಿಕ್ಕೋಡಿ, ರಾಯಭಾಗಗಳಲ್ಲಿ 10 ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ವಿಜಯಪುರದಲ್ಲೂ 7 ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ಮೈಸೂರಿನಲ್ಲಿ ಮೂರು, ಗದಗ, ಕಲ್ಬುರ್ಗಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಬೆಳಕಿಗೆ ಬರುವುದರ ಜತೆಗೆ ಒಂದೇ ದಿನದಲ್ಲಿ 34 ಹೊಸ ಪ್ರಕರಣಗಳು ಪತ್ತೆಯಾಗಿರುವುದರಿಂದ ಇಡೀ ರಾಜ್ಯ ಕೊರೊನಾ ಹಾಟ್‍ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿದೆ.

ದಿನೇ ದಿನೇ ರಾಜ್ಯದಲ್ಲಿ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಜನ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವತ್ತ ಗಮನ ಹರಿಸದಿರುವುದು ದುರಂತವೇ ಸರಿ. ಯಾರಿಗಾದರೂ ಸೋಂಕು ಲಕ್ಷಣ ಕಾಣಿಸಿಕೊಂಡರೆ ಸಮೀಪದ ಆಸ್ಪತ್ರೆಗೆ ತೆರಳಿ ಸ್ವಯಂ ತಪಾಸಣೆಗೆ ಒಳಪಡಿಸಿಕೊಂಡು ಕುಟುಂಬದವರಿಂದ ಅಂತರ ಕಾಯ್ದುಕೊಂಡು ಕ್ವಾರಂಟೈನ್‍ಗೆ ಒಳಗಾದರೆ ಸೋಂಕು ಹರಡುವಿಕೆಯನ್ನು ತಪ್ಪಿಸಬಹುದಾಗಿದೆ.

ಆದರೆ, ಕೆಲವರು ಉದ್ದೇಶ ಪೂರ್ವಕವಾಗಿ ಸೋಂಕು ಲಕ್ಷಣ ಕಾಣಿಸಿಕೊಂಡರೂ ಉದಾಸೀನ ತೋರುತ್ತಿರುವುದರಿಂದ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ.ಇನ್ನು ಮುಂದಾದರೂ ಉಚಿತ ಹಾಲು ಮತ್ತು ದಿನಸಿಗೆ ಮುಗಿ ಬೀಳುವುದನ್ನು ಬಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ಲಾಕ್‍ಡೌನ್ ಸಂದರ್ಭದಲ್ಲಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ ಮನೆಯಲ್ಲೇ ಕುಟುಂಬದವರೊಂದಿಗೆ ನೆಮ್ಮದಿಯಾಗಿ ಕಾಲ ಕಳೆಯುವ ಮೂಲಕ ಮಹಾಮಾರಿ ಕೊರೊನಾ ಸೋಂಕು ಹೆಚ್ಚದಿರುವಂತೆ ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ.

ಕೊರೊನಾ ಸೋಂಕಿನ ಪ್ರಕರಣಗಳು ದ್ವಿಗುಣಗೊಳ್ಳುತ್ತಲೇ ಇದ್ದು, ಮೂರನೇ ಹಂತಕ್ಕೆ ಕಾಲಿಟ್ಟರೆ ಅಪಾರ ಸಾವು-ನೋವು ಸಂಭವಿಸುವ ಸಾಧ್ಯತೆ ಇರುವುದರಿಂದ ಇನ್ನು ಮುಂದಾದರೂ ಜನ ಸೋಂಕಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳುವ ಅವಶ್ಯಕತೆ ಇದೆ.

Facebook Comments

Sri Raghav

Admin