35 ತಾಲ್ಲೂಕಿನ 160 ಹೋಬಳಿಗಳಲ್ಲಿ ಮಳೆ ಇಲ್ಲ : ಮೂರನೆ ವರ್ಷವೂ ಬರ

ಈ ಸುದ್ದಿಯನ್ನು ಶೇರ್ ಮಾಡಿ

bara

ಬೆಂಗಳೂರು, ಸೆ.8- ಜಲಕ್ಷಾಮದಿಂದ ತತ್ತರಿಸಿರುವ ರಾಜ್ಯದಲ್ಲಿ ಸತತ 3ನೆ ವರ್ಷವೂ ಬರದ ಛಾಯೆ ಆವರಿಸತೊಡಗಿದೆ.  ನೈರುತ್ಯ ಮುಂಗಾರು ರಾಜ್ಯದಲ್ಲಿ ಶೇ.15ರಷ್ಟು ಕೊರತೆ ಉಂಟಾಗಿದ್ದರೆ, ರಾಜ್ಯದ ಯಾವುದೇ ಜಲಾಶಯಗಳು ಭರ್ತಿಯಾಗದೆ ಆತಂಕಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಇದರ ನಡುವೆಯೇ ಮತ್ತೆ ಮುಂಗಾರು ಕೈಕೊಟ್ಟಿದ್ದು, 3ನೆ ವರ್ಷವೂ ಕೂಡ ರಾಜ್ಯ ಬರದ ದವಡೆಗೆ ಸಿಲುಕಿದೆ.ಅದರಲ್ಲೂ ಅತಿ ಹೆಚ್ಚು ಮಳೆ ಬಿದ್ದು ಅತಿವೃಷ್ಟಿ ಉಂಟಾಗುತ್ತಿದ್ದ ಕೊಡಗು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲೇ ಮಳೆ ಕೊರತೆ ಹೆಚ್ಚಾಗಿ ಕಂಡು ಬಂದಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ರಾಜ್ಯದ ಐದು ಜಿಲ್ಲೆಗಳು ತೀವ್ರ ಮಳೆ ಕೊರತೆ ಎದುರಿಸುತ್ತಿದ್ದು, 35 ತಾಲೂಕು ಹಾಗೂ 160 ಹೋಬಳಿಗಳು ಮಳೆ ಕೊರತೆಯನ್ನು ಎದುರಿಸುತ್ತಿವೆ. ಈ ತಿಂಗಳ ಅಂತ್ಯದ ವೇಳೆಗೆ ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶಗಳ ಪಟ್ಟಿಯನ್ನು ಅಕೃತವಾಗಿ ಘೋಷಣೆ ಮಾಡಲಿದೆ.  ಈಗಾಗಲೇ ಬರಪೀಡಿತ ಪ್ರದೇಶಗಳ ಪಟ್ಟಿ ಸಿದ್ಧಪಡಿಸುವ ಕಾರ್ಯ ಕಂದಾಯ ಇಲಾಖೆಯಿಂದ ಪ್ರಾರಂಭವಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಮುಂಗಾರು ಪ್ರಾರಂಭವಾಗುವ ಜೂ.1 ರಿಂದ ಆಗಸ್ಟ್ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 689 ಮಿಲಿ ಮೀಟರ್‌ನಷ್ಟು ವಾಡಿಕೆ ಮಳೆಯಾಗಬೇಕಿತ್ತು.

ಆದರೆ 586 ಮಿಲಿ ಮೀಟರ್‌ನಷ್ಟು ಮಳೆ ಬಿದ್ದಿದ್ದು, ಶೇ.15ರಷ್ಟು ಕೊರತೆಯನ್ನು ರಾಜ್ಯ ಎದುರಿಸುತ್ತಿದೆ. ಅದರಲ್ಲೂ ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊರತೆ ಹೆಚ್ಚಾಗಿರುವುದು ಕಂಡು ಬಂದಿದೆ. ಮಳೆ ಕೊರತೆಯಿಂದ ಕೆಲವೆಡೆ ಬಿತ್ತಿದ ಬೆಳೆ ಒಣಗುತ್ತಿದ್ದರೆ ಹಲವೆಡೆ ಬೆಳೆ ಮೊಳಕೆಯೊಡೆಯಲಿಲ್ಲ. ಹೀಗಾಗಿ ಜನ ಮತ್ತು ಜಾನವಾರು ಈಗಾಗಲೇ ತತ್ತರಿಸುವಂತಾಗಿದೆ.
ಕಾವೇರಿ ಜಲಾನಯನ ಭಾಗವಾದ ಮೂಡಿಗೆರೆ ಚಿಕ್ಕಮಗಳೂರು, ಕೊಡಗು, ಸೋಮವಾರಪೇಟೆ, ವಿರಾಜಪೇಟೆ ತಾಲೂಕುಗಳು ಬರದ ಛಾಯೆಗೆ ಸಿಲುಕುತ್ತಿವೆ.  ಇನ್ನು ವಿದ್ಯುತ್ ಉತ್ಪಾದಿಸುವ ರಂಗನಮಕ್ಕಿ, ಸೂಪಾ, ವರಾಹಿ ಮತ್ತಿತರ ಜಲಾಶಯಗಳಿಗೆ ನೀರು ಹರಿದುಬರುತ್ತಿದ್ದ ಮಲೆನಾಡು ಭಾಗದಲ್ಲೂ ಕೂಡ ಬರದ ಕಾರ್ಮೋಡ ಆವರಿಸಿದೆ. ಶಿಕಾರಿಪುರ, ತೀರ್ಥಹಳ್ಳಿ, ಕೊಪ್ಪ, ಶಿವಮೊಗ್ಗ, ಸೊರಬ, ಹೊಸನಗರ, ಆಲೂರು, ಚಿಕ್ಕಮಗಳೂರು, ಎನ್.ಆರ್.ಪುರ ಸೇರಿದಂತೆ ಬಹುತೇಕ ಮಲೆನಾಡು ಭಾಗ ಮಳೆ ಕೊರತೆಯಿಂದ ಮಳೆಗಾಲದಲ್ಲಿಯೇ ತತ್ತರಿಸತೊಡಗಿವೆ.
ಇನ್ನು ಉತ್ತರ ಕರ್ನಾಟಕದ ವಿಜಯಪುರ, ಬೈಲಹೊಂಗಲ, ಬೆಳಗಾವಿ, ಖಾನಾಪುರ, ಜೇವರ್ಗಿ, ಗದಗ, ದೇವದುರ್ಗ, ಶಿರಹಟ್ಟಿ, ಸಿಂಧನೂರು ತಾಲೂಕುಗಳು ಕೂಡ ಬರದ ಛಾಯೆಗೆ ಸಿಲುಕತೊಡಗಿವೆ.

ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೆ.ಆರ್.ನಗರ, ಬೀದರ್, ಬಾಲ್ಕಿ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹಾನಗಲ್ ತಾಲೂಕಿನ ಕೆಲವು ಹೋಬಳಿಗಳು ಕೂಡ ಮಳೆ ಕೊರತೆಯನ್ನು ತೀವ್ರವಾಗಿ ಎದುರಿಸುತ್ತಿವೆ.  ಕರಾವಳಿ ಭಾಗದ ದಕ್ಷಿಣ ಕನ್ನಡ, ಕುಂದಾಪುರ, ಪುತ್ತೂರು, ಸುಳ್ಯಾ, ಕಾರ್ಕಳ ಮೊದಲಾದ ಭಾಗದಲ್ಲೂ ಕೂಡ ಮಳೆ ಅಭಾವ ಹೆಚ್ಚಾಗಿ ಕಂಡು ಬಂದಿದೆ. ಕಳೆದ ವರ್ಷವೂ ಕೂಡ ರಾಜ್ಯದಲ್ಲಿ ಬರ ತೀವ್ರವಾಗಿತ್ತು. 27 ಜಿಲ್ಲೆಗಳ 135 ತಾಲೂಕುಗಳಲ್ಲಿ ರಾಜ್ಯಸರ್ಕಾರವು ಬರ ಪೀಡಿತ ಪ್ರದೇಶಗಳೆಂದು ಅಕೃತವಾಗಿ ಘೋಷಿಸಿತ್ತು. 2012ರಲ್ಲೂ 157 ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದವು. 2014ರಲ್ಲೂ ಕೂಡ ರಾಜ್ಯ ಬರದಿಂದ ಮುಕ್ತವಾಗಿರಲಿಲ್ಲ. ಈಗಾಗಲೇ 35 ತಾಲೂಕುಗಳು ಈ ಬಾರಿ ಬರದ ಛಾಯೆಗೆ ಸಿಲುಕಿವೆ. ಆಗಸ್ಟ್‌ನಂತೆ ಸೆಪ್ಟೆಂಬರ್ 2ನೆ ವಾರದಲ್ಲೂ ಮಳೆ ಕೊರತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದುವರೆದಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಮಳೆ ಕೊರತೆ ಇರುವ ಪ್ರದೇಶಗಳ ಸಂಖ್ಯೆ ಹೆಚ್ಚಾಗಲಿದ್ದು, ಅಷ್ಟರಲ್ಲಿ ಬರ ಪೀಡಿತ ಪ್ರದೇಶಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಗಳಿವೆ.

► Follow us on –  Facebook / Twitter  / Google+

Facebook Comments

Sri Raghav

Admin