3500 ಕೋಟಿ ಪರಿಹಾರಕ್ಕೆ ಮನವಿ : ನ.2ರಂದು ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

Baragala

ಬೆಂಗಳೂರು, ಅ.30- ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬೆನ್ನಲ್ಲೆ ವಸ್ತುಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರದ ತಂಡ ನ.2ರಂದು ರಾಜ್ಯಕ್ಕೆ ಬರಲಿದೆ. ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ನೀರಜ ಆದಿದಾಮ್ ನೇತೃತ್ವದ 10 ಮಂದಿ ಅಧಿಕಾರಿಗಳ ತಂಡ ರಾಜ್ಯಕ್ಕೆ ಬರಲಿದ್ದು, ನ.2ರಂದು ರಾಜ್ಯದ ಅಧಿಕಾರಿಗಳೊಂದಿಗೆ ತಂಡ ಸಭೆ ನಡೆಸಿ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಿದೆ.  ಬಳಿಕ ಮೂರು ತಂಡಗಳಾಗಿ ಸ್ಥಳ ಪರಿಶೀಲನೆಗಾಗಿ ಜಿಲ್ಲಾವಾರು ಪ್ರವಾಸ ಕೈಗೊಳ್ಳಲಿದೆ. ಒಂದು ತಂಡ ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತದೆ. ಮತ್ತೊಂದು ತಂಡ ರಾಮನಗರ, ಚಾಮರಾಜನಗರ, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸುವುದು. ಮೂರನೆ ತಂಡ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಚರಿಸಿ ಬರ ಪರಿಸ್ಥಿತಿಯ ಅಧ್ಯಯನ ಮಾಡಲಿದೆ.

ನ.2ರಂದು ರಾಜ್ಯಕ್ಕೆ ಆಗಮಿಸುವ ಈ ತಂಡಗಳು ನ.3ರಿಂದ ನ.5ರ ಮಧ್ಯಾಹ್ನದವರೆಗೂ ಬರ ಪೀಡಿತ ಪ್ರದೇಶಗಳಲ್ಲಿ ಮಳೆ-ಬೆಳೆ ಬಗ್ಗೆ ಪರಿಶೀಲನೆ ನಡೆಸಲಿವೆ. ಮಧ್ಯಾಹ್ನ ಮತ್ತೆ ರಾಜ್ಯದ ಅಧಿಕಾರಿಗಳೊಂದಿಗೆ ಬರ ಪೀಡಿತ ಪ್ರದೇಶದ ಸ್ಥಿತಿಗತಿ ಕುರಿತು ಚರ್ಚೆ ನಡೆಸಿ ಅಗತ್ಯ ಮಾಹಿತಿ ಪಡೆದು ದೆಹಲಿಗೆ ಮರಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮೂರೂವರೆ ಸಾವಿರ ಕೋಟಿ ರೂ.ಗೆ ಮನವಿ: ರಾಜ್ಯದಲ್ಲಿ ಉಂಟಾಗಿರುವ ನೆರೆ, ಬರ ಪೀಡಿತ ಪ್ರದೇಶಗಳಿಗೆ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ರಾಜ್ಯದ 110 ತಾಲೂಕುಗಳಲ್ಲಿ 12,500ಕೋಟಿ ರೂ.ನಷ್ಟು ಬೆಳೆ ಮತ್ತಿತರ ನಷ್ಟ ಉಂಟಾಗಿದೆ ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಅಲ್ಲದೆ, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ಸುಮಾರು 3,175.77 ಕೋಟಿ ರೂ. ನೆರವು ನೀಡುವಂತೆ ಕೋರಿಕೆ ಸಲ್ಲಿಸಿದೆ.

ಅದೇ ರೀತಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಅತಿವೃಷ್ಟಿ ನೆರೆ ಹಾವಳಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಸುಮಾರು 386 ಕೋಟಿ ರೂ. ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಕಳೆದ ವಾರವಷ್ಟೆ ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರ ಬರ ಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ತಂಡವನ್ನು ಕಳುಹಿಸುತ್ತಿದೆ. ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈಗ ಸರ್ಕಾರವೇ ಘೋಷಿಸಿರುವ ಅಧಿಕೃತ ಬರ ಪೀಡಿತ ತಾಲೂಕುಗಳ ಸಂಖ್ಯೆ 139ಕ್ಕೆ ತಲುಪಿದೆ.

ಅಕ್ಟೋಬರ್‍ನಲ್ಲಿ ಶೇ.90ರಷ್ಟು ಮಳೆ ಕೊರತೆ ಉಂಟಾಗಿದ್ದು, ಇಡೀ ರಾಜ್ಯವೇ ಬರದ ಛಾಯೆಗೆ ಸಿಲುಕುತ್ತಿದೆ. ಕೇಂದ್ರದ ಅಧ್ಯಯನ ತಂಡ ರಾಜ್ಯದಲ್ಲಿ ವಸ್ತುಸ್ಥಿತಿ ಅಧ್ಯಯನ ಮಾಡಿ ವರದಿ ಸಲ್ಲಿಸಿದ ನಂತರ ರಾಜ್ಯಕ್ಕೆ ಬರ ಪರಿಹಾರ ಧನ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin