5 ಬಸ್‍ಗಳ ಮೇಲೆ ದಾಳಿ ಮಾಡಿ 37 ಕಾರ್ಮಿಕರ ಹತ್ಯೆಗೈದ ಜಿಹಾದಿ ಹುಚ್ಚು ಹಿಡಿದ ಉಗ್ರರು..!

ಈ ಸುದ್ದಿಯನ್ನು ಶೇರ್ ಮಾಡಿ

ಕ್ವಾಗಾಡೌಗೌ(ಬುರ್ಕಿನಾ ಫಾಸೋ), ನ.7-ಪಶ್ಚಿಮ ಆಫ್ರಿಕಾ ದೇಶದಲ್ಲಿ ಜಿಹಾದಿ(ಧರ್ಮಯುದ್ಧ) ಉಗ್ರಗಾಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಶಸ್ತ್ರಸಜ್ಜಿತ ಬಂದುಕೋರರು ನಡೆಸಿದ ಭೀಕರ ದಾಳಿಯೊಂದರಲ್ಲಿ 37 ಮಂದಿ ಹತರಾಗಿ, ಅನೇಕರು ಗಾಯಗೊಂಡಿದ್ದಾರೆ. ಉಗ್ರರ ಆಕ್ರಮಣದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ. ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉನ್ನತ ವೈದ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

ಬುರ್ಕಿನಾ ಫಾಸೋದ ಕೆನಡಾ ಗಂಡಿ ಕಂಪೆನಿಯ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ 5 ಬಸ್‍ಗಳ ಮೇಲೆ ಉಗ್ರರು ದಾಳಿ ನಡೆಸಿ 37 ನೌಕರರನ್ನು ಕೊಂದು ಹಾಕಿದ್ದಾರೆ. ಈ ಭೀಕರ ನರಮೇಧದಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂದು ಪೂರ್ವ ಪ್ರಾಂತ್ಯದ ಗೌರ್ನರ್ ಸೈಡೌ ಸಂಗು ತಿಳಿಸಿದ್ದಾರೆ.  ಐದು ಬಸ್‍ಗಳಿಗೆ ಬೆಂಗಾವಲಿನಲ್ಲಿ ರಕ್ಷಣೆಗೆ ನಿಯೋಜಿತವಾಗಿದ್ದ ಮಿಲಿಟರಿ ವಾಹನ ಸಹ ಸ್ಫೋಟಕದಿಂದ ಹಾನಿಗೀಡಾಗಿದೆ.

ಸ್ಯಾಮಫೋ ಗಣಿ ಸಂಸ್ಥೆಗೆ ಸ್ಥಳೀಯ ಕಾರ್ಮಿಕರು, ಗುತ್ತಿಗೆದಾರರು ಮತ್ತು ಸಾಮಗ್ರಿ ಪೂರೈಕೆದಾರರನ್ನು ಹೊತ್ತು ಐದು ಬಸ್‍ಗಳು ಚಲಿಸುತ್ತಿದ್ದವು. ಮಾರ್ಗ ಮಧ್ಯೆ ನಿರ್ಜನ ಪ್ರದೇಶದ ಮರೆಯಲ್ಲಿ ಅಡಗಿದ್ದ ಉಗ್ರರ ಗುಂಪುಗಳು ರಸ್ತೆಯ ಎರಡೂ ಕಡೆಗಳಿಂದ ಗುಂಡಿನ ಸುರಿಮಳೆಗರೆದರು. ಏನಾಗುತ್ತಿದೆ ಎಂದು ತಿಳಿಯುವುದಕ್ಕೆ ಮುನ್ನವೇ ಹಲವರು ಹತರಾದರು ಎಂದು ಅವರು ಹೇಳಿದ್ದಾರೆ.

ಬುರ್ಕಿನಾ ಫಾಸೋದಲ್ಲಿ ಕಳೆದ ಐದು ವರ್ಷಗಳಿಂದ ಜಿಹಾದಿ ಉಗ್ರರ ಉಪಟಳ ಹೆಚ್ಚಾಗಿದ್ದು, ನೂರಾರು ಮಂದಿ ಹತರಾಗಿ, ಅಸಂಖ್ಯಾತರು ಗಾಯಗೊಂಡಿದ್ದಾರೆ.  ಒಂದೆಡೆ ಆರ್ಥಿಕ ಕುಸಿತ, ಇನ್ನೊಂದೆಡೆ ರಾಜಕೀಯ ಅರಾಜಕತೆಯಿಂದ ನಲುಗಿರುವ ಪಶ್ಚಿಮ ಆಫ್ರಿಕಾ ರಾಷ್ಟ್ರದಲ್ಲಿ ಮುಸ್ಲಿಂ ಉಗ್ರರ ಪ್ರಾಬಲ್ಯ ಹೆಚ್ಚಾಗಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ