15 ಕಟ್ಟಡ ಮಾಲೀಕರಿಂದ 370 ಕೋಟಿ ತೆರಿಗೆ ವಂಚನೆ, ಬಿಬಿಎಂಪಿ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಿಂದಲೇ ಬಹಿರಂಗ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.12- ನಗರದಲ್ಲಿ ಕೇವಲ 14 ರಿಂದ 15 ಕಟ್ಟಡಗಳ ಮಾಲೀಕರು ಸುಮಾರು 370 ಕೋಟಿ ರೂ.ಗಳಷ್ಟು ಆಸ್ತಿ ತೆರಿಗೆಯನ್ನು ಬೃಹತ್ ವಂಚನೆ ಮಾಡಿರುವ ಪ್ರಕರಣವನ್ನು ಸ್ವತಃ ಆಡಳಿತ ಪಕ್ಷದ ಸದಸ್ಯರು ಹಾಗೂ ಮಾಜಿ ವಿಪಕ್ಷ ನಾಯಕರೇ ಬಹಿರಂಗಪಡಿಸಿದ ಪ್ರಸಂಗ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಇಂದು ನಡೆಯಿತು.

ಬಿಜೆಪಿಯ ಸದಸ್ಯರು ಹಾಗೂ ಮಾಜಿ ವಿಪಕ್ಷ ನಾಯಕರಾಗಿದ್ದ ಪದ್ಮನಾಭರೆಡ್ಡಿ ಅವರು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿ ಮಾತನಾಡಿ 198 ವಾರ್ಡ್‍ಗಳ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ನಾವು 550 ಕೋಟಿಗಳಷ್ಟು ವೆಚ್ಚ ಮಾಡುತ್ತೇವೆ. ಆದರೆ, ನಗರದಲ್ಲಿ ಕೇವಲ 14 ರಿಂದ 15 ಕಟ್ಟಡಗಳಿಂದಲೇ ನಮಗೆ 370 ಕೋಟಿಯಷ್ಟು ತೆರಿಗೆ ವಂಚನೆಯಾಗಿದೆ.

ಎರಡು ತಿಂಗಳ ಅವಧಿಯಲ್ಲಿ ನಮ್ಮ ಅಧಿಕಾರಾವಧಿ ಮುಗಿಯ ಲಿದೆ. ಟೋಟಲ್ ಸ್ಟೇಷನ್ ಸರ್ವೆ ವರದಿ ಬಂದರೂ ತೆರಿಗೆ ಹಣ ಸಂಗ್ರಹವಾಗಿಲ್ಲ. ಮುಂದೆ ವರದಿ ಏನಾಯಿತು ಎಂದು ಯಾರನ್ನು ಕೇಳಬೇಕು. ಕೆಲವೊಬ್ಬ ಅಧಿಕಾರಿಗಳು ಸ್ಟಾರ್ ಹೊಟೇಲ್‍ಗೆ ಹೋಗಿ ವಿನಾಯಿತಿ ನೀಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ. ತಪ್ಪು ಮಾಡಿರುವ ಅಧಿಕಾರಿಗಳನ್ನು ಸಭೆಗೆ ಕರೆದು ಉತ್ತರ ಪಡೆಯುವಂತೆ ಪದ್ಮನಾಭರೆಡ್ಡಿ ಆಗ್ರಹಿಸಿದರು.

ಸ್ವಯಂಘೋಷಿತ ತೆರಿಗೆ ಪದ್ಧತಿಯಡಿ ಸರಿಯಾಗಿ ತೆರಿಗೆ ಕಟ್ಟದವರನ್ನು ಗುರುತಿಸಲು ಟೋಟಲ್ ಸ್ಟೇಷನ್ ಸರ್ವೆ ಮೂಲಕ ಪತ್ತೆಹಚ್ಚುವ ಕ್ರಮ ಕೈಗೊಳ್ಳಲಾಗಿತ್ತು. ಇದರಡಿ 15 ಕಟ್ಟಡಗಳ 370 ಕೋಟಿ ತೆರಿಗೆ ವಂಚನೆ ಬೆಳಕಿಗೆ ಬಂದಿದೆ.  ತೆರಿಗೆ ವಸೂಲಿ ಮಾಡದೆ ಅಧಿಕಾರಿಗಳು ಏನು ಮಾಡುತ್ತಾರೆ, ವಲಯವಾರು ಜಂಟಿ ಆಯುಕ್ತರನ್ನು ಕೂಡ ನೇಮಕ ಮಾಡಲಾಗಿದೆ.

ಅವರಿಗೆ ಎಲ್ಲ ಮಾಹಿತಿ ಇರುತ್ತದೆ. ಈ ರೀತಿ ತೆರಿಗೆ ವಂಚನೆ ಮಾಡಿರುವ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪದ್ಮನಾಭರೆಡ್ಡಿ ಆಗ್ರಹಿಸಿದರು. ನಾನು ಈ ಸಂಬಂಧ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ನೀಡಬೇಕು ಎಂದುಕೊಂಡಿದ್ದೆ. ಆದರೆ, ಜನಪ್ರತಿನಿಧಿಯಾದ ನಮಗೆ ಈ ಬಗ್ಗೆ ಚರ್ಚಿಸಲು ಕೌನ್ಸಿಲ್ ಎಂಬ ವೇದಿಕೆ ಇದೆ. ಹಾಗಾಗಿ ಇಲ್ಲಿ ಇದರ ವಿವರವನ್ನು ನೀಡುತ್ತಿದ್ದೇನೆ ಎಂದು ದಾಖಲೆಗಳನ್ನು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ಬಿಜೆಪಿ ಸದಸ್ಯರಾದ ಉಮೇಶ್‍ಶೆಟ್ಟಿ ಇವರಿಗೆ ಬೆಂಬಲಿಸಿ ಮಾತನಾಡಿ ಕೋಟ್ಯಂತರ ರೂ. ವಂಚಿಸಿದ ಅಧಿಕಾರಿಗಳು ಈಗ ಸಚಿವರೊಬ್ಬರ ಜತೆ ಓಡಾಡುತ್ತ ಇದ್ದಾರೆ. ಎರವಲು ಸೇವೆಯಲ್ಲಿ ಬಿಬಿಎಂಪಿಗೆ ಬಂದ ಅಧಿಕಾರಿಗಳಿಂದ ಇಂತಹ ಎಡವಟ್ಟುಗಳಾಗಿವೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗೌತಮ್‍ಕುಮಾರ್ ಅವರು ತೆರಿಗೆ ವಂಚಿಸಿದ ಮೂವರು ಜಂಟಿ ಆಯುಕ್ತರನ್ನು ಸಭೆಗೆ ಕರೆಸಿ ಸೂಕ್ತ ಮಾಹಿತಿ ಪಡೆದು ಚರ್ಚೆ ನಡೆಸಲಾಗುವುದು. ಇದಕ್ಕಾಗಿ ವಿಶೇಷ ಸಭೆ ಕರೆಯೋಣ ಎಂದು ಹೇಳಿದರು.

Facebook Comments