ಕ್ರಿಕೆಟ್ ಆಟಗಾರನ ಸೋಗಲ್ಲಿ ಬಂದು ಮೊಬೈಲ್ ಎಗರಿಸುತ್ತಿದ್ದ ಆಸಾಮಿ ಅಂದರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.15- ಕ್ರಿಕೆಟ್ ಆಟಗಾರನ ಸೋಗಿನಲ್ಲಿ ಬಂದು ಮೈದಾನದಲ್ಲಿ ಆಟವಾಡುತ್ತಿದ್ದ ಆಟಗಾರರ ಮೊಬೈಲ್ ಪೋನ್‍ಗಳನ್ನು ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿ 4.5 ಲಕ್ಷ ರೂ. ಮೌಲ್ಯದ 38 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಬಸವೇಶ್ವರನಗರ, ಬೋವಿ ಕಾಲೋನಿ ನಿವಾಸಿ ರವಿ (29) ಬಂಧಿತ ಆರೋಪಿ.
ಜಾಲಹಳ್ಳಿ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶ್ರೀನಿವಾಸಮೂರ್ತಿ ಮತ್ತು ನವೀನ್‍ಕುಮಾರ್ ಅವರು ಮಾರ್ಚ್ 11 ರಂದು ಸಂಜೆ 4 ಗಂಟೆಯಲ್ಲಿ ವಿ.ಪಿ.ರಸ್ತೆಯಲ್ಲಿ ಗಸ್ತಿನಲ್ಲಿದ್ದರು.

ಈ ಸಂದರ್ಭದಲ್ಲಿ ಮಹಾವೀರ್ ಎಂಟರ್‍ಪ್ರೈಸಸ್ ಎಂಬ ಮೊಬೈಲ್ ಅಂಗಡಿ ಬಳಿ ಒಬ್ಬಾತ ಕೈಯಲ್ಲಿ ಕವರ್ ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದು ಕಂಡ ಬಂದಿದೆ. ತಕ್ಷಣ ಸಿಬ್ಬಂದಿ ಆತನನ್ನು ಹಿಡಿದು ಪರಿಶೀಲಿಸಿದಾಗ ಐದು ವಿವಿಧ ಕಂಪನಿಯ ಮೊಬೈಲ್ ಪೋನ್‍ಗಳನ್ನು ಕಳವು ಮಾಡಿಕೊಂಡು ಮಾರಾಟ ಮಾಡಲು ಬಂದಿರುವುದು ತಿಳಿದು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿ ಕಳವು ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ರವಿ ಈ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಆಫೀಸ್‍ಬಾಯ್ ಆಗಿ ಕೆಲಸ ಮಾಡಿಕೊಂಡು, ನಂತರ ಕೆಲಸ ತೊರೆದು ಮದುವೆ ಸಮಾರಂಭಗಳಲ್ಲಿ ಫ್ಲವರ್ ಡೆಕೋರೇಷನ್ ಕೆಲಸ ಮಾಡಿಕೊಂಡಿದ್ದನು. ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದ್ದರಿಂದ ಕ್ರಿಕೆಟ್ ಆಡುವ ಅಭ್ಯಾಸವಿದ್ದುದರಿಂದ ದೊಡ್ಡ ಮೈದಾನಗಳಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡುವ ಆಟಗಾರನ ರೀತಿ ಬಟ್ಟೆ ಧರಿಸಿಕೊಂಡು ಹೋಗುತ್ತಿದ್ದನು.

ಪಂದ್ಯಾವಳಿಗಳನ್ನು ನೋಡುವ ಸಮಯದಲ್ಲಿ ಆಟಗಾರರು ಮೊಬೈಲ್ ಪೋನ್‍ಗಳನ್ನು ಒಂದೇ ಬ್ಯಾಗ್‍ನಲ್ಲಿ ಇಟ್ಟು ಹೋಗಿರುವುದನ್ನು ಗಮನಿಸಿ ಯಾರಿಗೂ ಗೊತ್ತಾಗದಂತೆ ಬ್ಯಾಗ್ ಕಳವು ಮಾಡಿಕೊಂಡು ಹೋಗುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿ ಸುಲಭವಾಗಿ ಹಣಗಳಿಸಬಹುದೆಂದು ಇದೇ ರೀತಿ ಬಸವನಗುಡಿ ನ್ಯಾಷನಲ್ ಕಾಲೇಜು, ಮಲ್ಲೇಶ್ವರಂ, ಜಯನಗರ, ಜಾಲಹಳ್ಳಿಯ ಎಚ್‍ಎಂಟಿ ಗ್ರೌಂಡ್, ಬಾಗಲಗುಂಟೆ ಪ್ರದೇಶದ ಆಟದ ಮೈದಾನಗಳಲ್ಲಿ ಕಳವು ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಯಶವಂತಪುರ ಉಪವಿಭಾಗದ ಎಸಿಪಿ ಶ್ರೀನಿವಾಸರೆಡ್ಡಿ, ಜಾಲಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಗುರುಪ್ರಸಾದ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Facebook Comments