35 ಲಕ್ಷ ರೂ. ನಿಷೇಧಿತ ನೋಟು ಪತ್ತೆ, ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.4- ನಿಷೇಧ ಮಾಡಲಾದ ಹಳೆಯ ನೋಟುಗಳನ್ನು ಚಲಾವಣೆಯಲ್ಲಿರುವ ನೋಟುಗಳಿಗೆ ಕಮಿಷನ್‍ಗಾಗಿ ಸಾರ್ವಜನಿಕರಿಗೆ ವಿನಿಮಯ ಮಾಡುತ್ತಿದ್ದ ಮೂವರನ್ನು ಉತ್ತರ ವಿಭಾಗದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ರೂ. ಮೌಲ್ಯದ ನಿಷೇಧಿತ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರು ಮೂಲದ ಪ್ರಸನ್ನ (40), ಶ್ರೀನಿವಾಸ (34), ಬೆಂಗಳೂರಿನ ಪ್ರಕಾಶನಗರದ ರಾಘವೇಂದ್ರ (41) ಬಂಧಿತರು. ಸೆ.2ರಂದು ಸಂಜೆ 6.45ರ ಸುಮಾರಿನಲ್ಲಿ ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಯ ಮಿಲ್ಕ್ ಕಾಲೋನಿ, ಎ ಬ್ಲಾಕ್ ಸರ್ವೀಸ್ ರಸ್ತೆ ಸಾರ್ವಜನಿಕ ಪಾರ್ಕ್ ಬಳಿ ಮೂವರು ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಬಂದು ಕೇಂದ್ರ ಸರ್ಕಾರ ನಿಷೇಧಿಸಿರುವ 500ರೂ. ಮುಖಬೆಲೆಯ  ಹಳೆಯ ನೋಟುಗಳನ್ನು ಸಾರ್ವಜನಿಕರಿಗೆ ಕಮಿಷನ್‍ಗಾಗಿ ಚಲಾವಣೆ ಮಾಡುತ್ತಿದ್ದಾರೆಂಬ ಮಾಹಿತಿ ಪಿಎಸ್‍ಐ ಲತಾ ಅವರಿಗೆ ಲಭಿಸಿದೆ.

ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮೂವರನ್ನು ವಶಕ್ಕೆ ಪಡೆದುಕೊಂಡು ಕಾರಿನಲ್ಲಿದ್ದ ಬ್ಯಾಗ್ ಪರಿಶೀಲಿಸಿದಾಗ ನಿಷೇಧಿತ 500ರೂ. ಮುಖಬೆಲೆಯ 35 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳು ಕಂಡುಬಂದಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಎಲೆಕ್ಟ್ರಾನಿಕ್ ಸಿಟಿಯ ಜಯಂತ್ ಎಂಬುವವರು ತಮಗೆ ಕೊಟ್ಟು ಸಾರ್ವಜನಿಕರಿಗೆ ಶೇ.10ರಂತೆ ಹೊಸ ನೋಟು ಕೊಟ್ಟು ಹಳೆ ನೋಟುಗಳನ್ನು ಖರೀದಿಸಿದರೆ ನಮಗೆ ರಿಸರ್ವ್ ಬ್ಯಾಂಕ್‍ನಲ್ಲಿ ಅಧಿಕಾರಿಗಳು ಪರಿಚಯವಿದ್ದು, ಈ ಹಳೆ ನೋಟುಗಳನ್ನು ಕಮಿಷನ್‍ಗೆ ತಾವೇ ರಿಸರ್ವ್ ಬ್ಯಾಂಕ್‍ನಲ್ಲಿ ಮೂರು ಪಟ್ಟು ಹೆಚ್ಚಿಗೆ ಅಂದರೆ ಶೇ.30ರಂತೆ ಹೊಸ ನೋಟುಗಳಿಗೆ ಬದಲಾವಣೇ ಮಾಡಿಸಿಕೊಡುವುದಾಗಿ ಜನರನ್ನು ನಂಬಿಸಿ ಚಲಾವಣೆ ಮಾಡಲು ಕಳುಹಿಸಿರುತ್ತಾರೆಂದು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ.

ಮಲ್ಲೇಶ್ವರಂ ಉಪವಿಭಾಗದ ಎಸಿಪಿ ವೆಂಕಟೇಶ್ ನಾಯ್ಡು ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಸಂಜೀವೇಗೌಡ ಅವರ ನೇತೃತ್ವದಲ್ಲಿ ಪಿಎಸ್‍ಐ ಲತಾ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

 

Facebook Comments