ನಾಳೆಯಿಂದ ಪಿಂಕ್ ಬಾಲ್ ಟೆಸ್ಟ್ : ದಾಖಲೆ ಬರೆಯಲು ಕೊಹ್ಲಿ, ಅಶ್ವಿನ್, ಇಶಾಂತ್ ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಾಬಾದ್, ಫೆ.23- ನಾಳೆಯಿಂದ ನಡೆಯಲಿರುವ ಹಗಲು ರಾತ್ರಿ ಪಿಂಕ್ ಬಾಲ್ ಟೆಸ್ಟ್ ಗೆಲ್ಲಲು ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಸಜ್ಜಾಗಿವೆ. ನಾಲ್ಕು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಹಾಗೂ ಭಾರತ ತಂಡವು ತಲಾ ಒಂದೊಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದರಿಂದ ವಿಶ್ವ ಟೆಸ್ಟ್ ಫೈನಲ್‍ಗೇರಲು ಉಳಿದಿರುವ ಎರಡು ಪಂದ್ಯಗಳು ಮಹತ್ವ ಪಡೆದುಕೊಂಡಿವೆ.

ಒಂದೆಡೆ ಪಂದ್ಯ ಗೆಲ್ಲಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ ಜೋ ರೂಟ್ ಸಜ್ಜಾಗಿದ್ದರೆ, ಮತ್ತೊಂದೆಡೆ ಭಾರತದ ಕಪ್ತಾನ ವಿರಾಟ್ ಕೊಹ್ಲಿ, ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ವೇಗಿ ಇಶಾಂತ್ ಶರ್ಮಾ ಅವರು ದಾಖಲೆ ಬರೆಯುವ ಕಾತರದಲ್ಲಿದ್ದಾರೆ.

# ಪಾಂಟಿಂಗ್ ದಾಖಲೆ ಮುರಿಯಲು ಕೊಹ್ಲಿ ಸಜ್ಜು:
ಕಳೆದ ಒಂದು ವರ್ಷದಿಂದ ಶತಕ ಬಾರಿಸಲು ವಿಫಲರಾಗಿರುವ ಟೀಂ ಇಂಡಿಯಾ ನಾಯಕ ಮೊಟೊರಾ ಟೆಸ್ಟ್‍ನಲ್ಲಿ ಶತಕ ಗಳಿಸಿದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿಪಾಂಟಿಂಗ್ ದಾಖಲೆಯನ್ನು ಮುರಿಯಲಿದ್ದಾರೆ.

ರಿಕ್ಕಿ ಇದುವರೆಗೂ ನಾಯಕನಾಗಿ 41 ಶತಕ ಗಳಿಸಿದ್ದರೆ, ವಿರಾಟ್ ಕೂಡ 41 ಸೆಂಚುರಿ ಬಾರಿಸಿದ್ದು ತೃತೀಯ ಟೆಸ್ಟ್‍ನಲ್ಲಿ ಕೊಹ್ಲಿ ಶತಕ ಬಾರಿಸಿದರೆ 42 ಶತಕ ಗಳಿಸುವ ಮೂಲಕ ಅತಿ ಹೆಚ್ಚು ಶತಕ ಗಳಿಸಿದ ವಿಶ್ವದ ನಾಯಕ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

# ಅಶ್ವಿನ್ 400:
ಭಾರತ ತಂಡದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೂ 76 ಟೆಸ್ಟ್‍ಗಳಿಂದ 394 ವಿಕೆಟ್ ಕೆಡವಿದ್ದು ಮೊಟರಾ ಟೆಸ್ಟ್‍ನಲ್ಲಿ 6 ವಿಕೆಟ್ ಕಬಳಿಸಿದರೆ 400 ವಿಕೆಟ್‍ಗಳ ಗೊಂಚಲು ಪಡೆದ ಭಾರತದ ಕಪಿಲ್‍ದೇವ್, ಅನಿಲ್‍ಕುಂಬ್ಳೆ, ಹರಭಜನ್‍ಸಿಂಗ್ ಸಾಲಿಗೆ ಸೇರಲಿದ್ದಾರೆ.

# 100ನೇ ಟೆಸ್ಟ್:
ಇನ್ನು ಭಾರತದ ವೇಗಿ ಇಶಾಂತ್ ಶರ್ಮಾಗೆ ಇದು 100ನೇ ಟೆಸ್ಟ್. ಇದುವರೆಗೂ ಅವರು 99 ಪಂದ್ಯಗಳಿಂದ 300 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

Facebook Comments