4ನೆ ದಿನವೂ ಬಿಬಿಎಂಪಿಯಿಂದ ರಾಜಕಾಲುವೆ ಒತ್ತುವರಿ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

BBMp-1

ಬೆಂಗಳೂರು, ಆ.9- ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಾಲ್ಕನೆ ದಿನವಾದ ಇಂದೂ ಕೂಡ ಮುಂದುವರಿದಿದೆ. ಕೆಲವೆಡೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದರೆ, ಮತ್ತೆ ಕೆಲವೆಡೆ ಒತ್ತುವರಿಯಾದ ಜಾಗದ ಬಗ್ಗೆ ಸರ್ವೆ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಭೀತಿಗೊಳಗಾದ ನಿವಾಸಿಗಳು, ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಡೆಯಿತು.
ಬೊಮ್ಮನಹಳ್ಳಿ ಬಳಿಯ ಕೈಕೊಂಡಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾದಾಗ ಮನೆ ಮಾಲೀಕರು ಮತ್ತು ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಇಂದು ಮಧ್ಯಾಹ್ನ ಆಯುಕ್ತರನ್ನು ಭೇಟಿ ಮಾಡಲಿದ್ದೇವೆ. ಅಲ್ಲಿಯವರೆಗೆ ಸಮಯ ನೀಡಿ. ನಾವೇ ನಮ್ಮ ಮನೆಗಳನ್ನು ತೆರವು ಮಾಡಿಕೊಡುತ್ತೇವೆ ಎಂದು ಮಾಲೀಕರು ಪರಿಪರಿಯಾಗಿ ಹೇಳಿದರಾದರೂ ಯಾವುದಕ್ಕೂ ಕ್ಯಾರೆ ಎನ್ನದೆ ಸಿಬ್ಬಂದಿಗಳು ಪೊಲೀಸರ ನೆರವಿನೊಂದಿಗೆ ಒತ್ತುವರಿ ಜಾಗವನ್ನು ತೆರವು ಮಾಡಿದರು.  ಅರಕೆರೆ ವಾರ್ಡ್‍ನ ಅವನಿ ಶೃಂಗೇರಿ ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಲಾಯಿತು. ಇಲ್ಲಿನ ಮನೆ ಮಾಲೀಕರು ಒತ್ತುವರಿಯಾಗಿರುವ ಜಾಗವನ್ನು ತಾವೇ ತೆರವುಗೊಳಿಸಿದರು.   ಜೆಸಿಬಿಯಿಂದ ತೆರವು ಮಾಡಿದರೆ ಇಡೀ ಮನೆ ಉರುಳುತ್ತದೆ ಎಂದು ಮನೆ ಮಾಲೀಕರು ಸ್ವಂತ ಖರ್ಚಿನಿಂದಲೇ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿಕೊಟ್ಟರು. ಶುಭ ಎನ್‍ಕ್ಲೇವ್ ಲೇಔಟ್ ಬಳಿ ಕಾರ್ಯಾಚರಣೆ ವೇಳೆ ಅಲ್ಲಿನ ನಿವಾಸಿಗಳು ಅಡ್ಡಿಪಡಿಸಿ ಸ್ವಯಂ ತೆರವುಗೊಳಿಸಲು ಅನುಮತಿ ನೀಡುವಂತೆ ಒತ್ತಾಯಿಸಿದರು.

ಕೆಲವರು ಜೆಸಿಬಿಗಳಿಗೆ ಅಡ್ಡಬಂದು ಒತ್ತುವರಿ ತಡೆಯಲು ಯತ್ನಿಸಿದರಾದರೂ ಪೊಲೀಸರ ನೆರವು ಪಡೆದು ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿದರು.   ಯಲಹಂಕದ ದೊಡ್ಡಬೊಮ್ಮಸಂದ್ರದಲ್ಲಿ ಒತ್ತುವರಿಯಾಗಿರುವ ಜಾಗದ ಸರ್ವೆ ಕಾರ್ಯವನ್ನು ಅಧಿಕಾರಿಗಳು ನಡೆಸುತ್ತಿರುವ ಸಂದರ್ಭದಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಗಳು ಒತ್ತುವರಿಯಾದ ಜಾಗದಲ್ಲಿ ನಿರ್ಮಾಣವಾಗಿರುವುದು ಕಂಡುಬಂದಿದೆ.  ಆತಂಕಕ್ಕೊಳಗಾಗಿರುವ ಜನ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದಾರೆ. ಇಲ್ಲಿ ಮನೆ ನಿರ್ಮಾಣ ಮಾಡುವಾಗ ಯಾವುದೇ ರಾಜಕಾಲುವೆ ಇರಲಿಲ್ಲ. ಈಗ ಸರ್ವೆ ಮಾಡಲು ಬಂದಿದ್ದೀರ ಎಂದು ಅಧಿಕಾರಿಗಳ ಜತೆ ಘರ್ಷಣೆಗಿಳಿದಿದ್ದಾರೆ. ಸ್ಥಳಕ್ಕೆ ಡಿಸಿಪಿ ಬೋರಲಿಂಗಯ್ಯ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.   ಮಹದೇವಪುರ, ಯಲಹಂಕ, ಬೊಮ್ಮನಹಳ್ಳಿ, ಕೆಆರ್ ಪುರ ಮುಂತಾದ ಕಡೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಕೆಲವರು ಒಂದು ದಿನದ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.

Facebook Comments

Sri Raghav

Admin