ಶಾಕಿಂಗ್ : ಬೆಂಗಳೂರಲ್ಲಿ ಕಿಲ್ಲರ್ ಕೊರೋನಾಗೆ ಒಂದೇ ದಿನ ನಾಲ್ವರು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.11-ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರಿದಿದ್ದು, ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಕೊರೊನಾ ಮಹಾಮಾರಿಗೆ ಬಲಿಯಾಗಿರುವುದನ್ನು ಬಿಎಂಸಿ ಡೀನ್ ಡಾ.ಜಯಂತಿ ಸ್ಪಷ್ಟಪಡಿಸಿದ್ದಾರೆ.

ಬೌರಿಂಗ್ ಆಸ್ಪತ್ರೆಯಿಂದ ಶಿಫ್ಟ್ ಆಗಿದ್ದ ಇಬ್ಬರು ರೋಗಿಗಳು ಹಾಗೂ ಇತರ ಎರಡು ಆಸ್ಪತ್ರೆಗಳಿಂದ ಬಂದಿದ್ದ ಮತ್ತಿಬ್ಬರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಸೋಂಕಿನಿಂದ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಮೃತಪಟ್ಟಿರುವುದರಿಂದ ಸಿಲಿಕಾನ್ ಸಿಟಿಯೊಂದರಲ್ಲೇ ಮಹಾಮಾರಿಗೆ ಬಲಿಯಾದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಲಾಕ್‍ಡೌನ್ ತೆರವುಗೊಳಿಸಿದ ನಂತರ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಗರದಲ್ಲಿ 8 ಲಕ್ಷಕ್ಕೂ ಹೆಚ್ಚು ಮಂದಿಯ ಲೈಫ್ ರಿಸ್ಕ್‍ನಲ್ಲಿದ್ದು, 6 ಲಕ್ಷಕ್ಕೂ ಹೆಚ್ಚು ಮಂದಿ ಹೈ ರಿಸ್ಕ್ ಕೆಟಗರಿಯಲ್ಲಿದ್ದು, ಇವರೆಲ್ಲರಿಗೂ ಸೋಂಕು ತಗುಲುವ ಸಾಧ್ಯತೆ ಇರುವುದು ಆರೋಗ್ಯ ಇಲಾಖೆ ಸರ್ವೆಯಲ್ಲಿ ಬಯಲಾಗಿದೆ.

12 ಸಾವಿರಕ್ಕೂ ಹೆಚ್ಚು ಮಂದಿ ಶೀತಜ್ವರದಿಂದ ಬಳಲುತ್ತಿದ್ದರೆ, ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರೊಂದಿಗೆ 34 ಸಾವಿರ ಮಂದಿ ಗರ್ಭಿಣಿಯರಿದ್ದರೆ, 2666ಕ್ಕೂ ಹೆಚ್ಚು ಮಂದಿ ಐಎಲ್‍ಐನಿಂದ ಬಳಲುತ್ತಿದ್ದಾರೆ.

ಈ ಎಲ್ಲ ಅಂಕಿ-ಅಂಶಗಳನ್ನು ಗಮನಿಸಿದರೆ ರಾಜಧಾನಿಯಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Facebook Comments