4 ಡಿಸಿಎಂ ಹುದ್ದೆಗಳ ಸೃಷ್ಟಿ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.3- ಒಂದೆಡೆ ಸಂಪುಟ ರಚನೆಯೇ ಕಗ್ಗಂಟಾಗಿರುವ ಬೆನ್ನಲ್ಲೇ ಮತ್ತೊಂದೆಡೆ ಉಪಮುಖ್ಯಮಂತ್ರಿ ಸ್ಥಾನ ಪಡೆಯಲು ಬಿಜೆಪಿಯಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಸಾಂವಿಧಾನಿಕವಾಗಿ ಅಷ್ಟೊಂದು ಮಹತ್ವವಲ್ಲದ ಈ ಹುದ್ದೆಯು ಇತ್ತೀಚೆಗೆ ಮುಖ್ಯಮಂತ್ರಿ ನಂತರ 2ನೇ ಪ್ರಭಾವಿ ಹುದ್ದೆ ಎಂದು ರಾಜಕೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆಯಲು ಸರಿಸುಮಾರು ಒಂದು ಡಜನ್ ಆಕಾಂಕ್ಷಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಜಾತಿವಾರು, ಜಿಲ್ಲಾವಾರು ಹಾಗೂ ಪ್ರಾದೇಶಿಕ ಸಮತೋಲನ ಕಾಪಾಡಿಕೊಳ್ಳುವ ಉದ್ದೇಶದಿಂದ ಡಿಸಿಎಂ ಸ್ಥಾನವನ್ನು ಆಯಾ ಕಾಲಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳು ಸೃಷ್ಟಿಸುತ್ತಾ ಬಂದಿವೆ. ರಾಜಕೀಯ ಪರಿಭಾಷೆಯಲ್ಲಿ ಇದನ್ನು ಗಂಜಿಕೇಂದ್ರ ಎಂದೇ ಹೇಳಲಾಗುತ್ತಿದೆಯಾದರೂ ಇತ್ತೀಚಿನ ದಿನಗಳಲ್ಲಿ ಇದರ ಸ್ಥಾನಮಾನ ಹೆಚ್ಚುತ್ತಿರುವುದರಿಂದ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೂ ಕಡೆಪಕ್ಷ ಡಿಸಿಎಂ ಹುದ್ದೆ ಪಡೆಯಬೇಕೆಂಬುದು ಅಭಿಲಾಷೆಯಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದಲ್ಲಿ ಮೂರು ಡಿಸಿಎಂಗಳನ್ನು ಸೃಷ್ಟಿಸಲಾಗಿತ್ತು. ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ ಮತ್ತು ಅಚ್ಚರಿ ಎಂಬಂತೆ ಲಕ್ಷ್ಮಣ್ ಸವದಿಗೂ ಕೊಡಲಾಗಿತ್ತು. ಇದೀಗ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನಾಳೆ ಅಥವಾ ಗುರುವಾರ ಸಂಪುಟ ರಚನೆಯಾಗಲಿದ್ದು, ಇದೀಗ 3-4 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ.

# ರೇಸ್‍ನಲ್ಲಿ ಯರ್ಯಾರು?:
ಡಿಸಿಎಂ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಸಚಿವ ಸ್ಥಾನ ಸಿಗುವುದೇ ಅನುಮಾನ ಎನ್ನುತ್ತಿರುವ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ನನಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ಮಾತ್ರ ಸಂಪುಟಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ಕಳೆದ ಬಾರಿ ಅನಿರೀಕ್ಷಿತವಾಗಿ ಡಿಸಿಎಂ ಸ್ಥಾನ ಪಡೆದಿದ್ದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪುನಃ ಅದೇ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಈ ಬಾರಿ ಅಶ್ವತ್ಥ ನಾರಾಯಣಗೆ ಠಕ್ಕರ್ ಕೊಟ್ಟು ಡಿಸಿಎಂ ಆಗಲು ಮಾಜಿ ಸಚಿವ ಆರ್.ಅಶೋಕ್ ಲಾಬಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಅಶೋಕ್ ಅವರಿಗೆ ಈ ಬಾರಿ ಡಿಸಿಎಂ ಜೊತೆಗೆ ಗೃಹ ಮತ್ತು ಬೆಂಗಳೂರು ಉಸ್ತುವಾರಿಯ ಜವಾಬ್ದಾರಿಯೂ ಸಿಗಲಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ 2ನೇ ಅತಿದೊಡ್ಡ ಸಮುದಾಯ ಎನಿಸಿರುವ ಒಕ್ಕಲಿಗ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡುವ ಬಗ್ಗೆಯೂ ದೆಹಲಿ ಬಿಜೆಪಿ ವರಿಷ್ಠರು ಸಕಾರಾತ್ಮಕವಾಗಿದ್ದಾರೆ. 2018ರ ಚುನಾವಣೆಯಲ್ಲೇ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಂಬಿತವಾಗಿ ಕೊನೆಗೆ ಒಂದೇ ಸ್ಥಾನಕ್ಕೆ ಸೀಮಿತಗೊಂಡ ಶ್ರೀರಾಮುಲು ಕೂಡ ಡಿಸಿಎಂ ಆಕಾಂಕ್ಷಿಯಾಗಿದ್ದಾರೆ.ಬಿಜೆಪಿಗೆ ಬೆನ್ನೆಲುಬಾಗಿ ನಿಂತಿರುವ ವಾಲ್ಮೀಕಿ ಸಮುದಾಯವನ್ನು ಓಲೈಸಿಕೊಳ್ಳುವ ಕಾರಣಕ್ಕಾಗಿಯೇ ಶ್ರೀರಾಮುಲು ಡಿಸಿಎಂ ಆಗಲಿದ್ದಾರೆ ಎಂಬ ಪುಕಾರುಗಳು ಹಬ್ಬಿವೆ.

ಇತ್ತೀಚಿನ ಬೆಳವಣಿಗೆಗಳು ಹಾಗೂ ಅವರ ಮೌನವನ್ನು ಗಮನಿಸಿದರೆ ಕೊನೆ ಕ್ಷಣದಲ್ಲಿ ಏನುಬೇಕಾದರೂ ನಡೆಯಬಹುದು ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬಂದಿದೆ.ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು, ಇದೀಗ ಸಂಪುಟದಲ್ಲಿ ಒಂದು ಸ್ಥಾನಮಾನ ಸಿಕ್ಕರೆ ಸಾಕು ಎನ್ನುವಂತಾಗಿರುವ ಕೆ.ಎಸ್.ಈಶ್ವರಪ್ಪ ಕೂಡ ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ.

ಒಂದು ಬಾರಿ ಉಪಮುಖ್ಯಮಂತ್ರಿಯಾಗಿದ್ದ ಅವರು ಇದೀಗ ನನಗೆ ಪ್ರಬಲ ಖಾತೆಯ ಜೊತೆಗೆ ಡಿಸಿಎಂ ಸ್ಥಾನವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮೂಲಗಳ ಪ್ರಕಾರ ಕೆ.ಎಸ್.ಈಶ್ವರಪ್ಪ ಮತ್ತು ಗೋವಿಂದ ಕಾರಜೋಳ ಕೊನೆ ಕ್ಷಣದವರೆಗೆ ಸಂಪುಟಕ್ಕೆ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. 2ಎಗೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆ ಮುಂದಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವ ವೀರಶೈವ-ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡಬೇಕು ಎಂಬ ಬೇಡಿಕೆ ಬಂದಿದೆ.

ಬಸವರಾಜ ಬೊಮ್ಮಾಯಿ ಅವರು ಲಿಂಗಾಯಿತ ಒಳಪಂಗಡದಲ್ಲಿ ಸಾದರ ಸಮುದಾಯಕ್ಕೆ ಸೇರಿದವರು. ಪಂಚಮಸಾಲಿ ಸಮುದಾಯದ ಬಿಜೆಪಿ ಬೆಂಬಲಕ್ಕೆ ನಿಂತಿರುವುದರಿಂದ ಈ ಸಮುದಾಯದಿಂದ ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ಅರವಿಂದ್ ಬೆಲ್ಲದ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಬೆಳವಣಿಗೆಗಳ ನಡುವೆಯೇ ಚಿತ್ರದುರ್ಗ ಜಿಲ್ಲೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಹಿಳಾ ಕೋಟಾದಲ್ಲಿ ಡಿಸಿಎಂ ಸ್ಥಾನ ಪಡೆದರೂ ಅಚ್ಚರಿ ಇಲ್ಲ ಎನ್ನುತ್ತಿದೆ ಬಿಜೆಪಿ ಮೂಲಗಳು.

Facebook Comments