ಸರ್ಕಾರಿ ಬಸ್‍ಗಳು ಮುಖಾಮುಖಿ ಡಿಕ್ಕಿಯಾಗಿ ಶಿಕ್ಷಕಿಯರು, ಚಾಲಕ ಸೇರಿ ನಾಲ್ವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accident

ಕಲಬುರಗಿ, ಜೂ.2-ಎರಡು ಸರ್ಕಾರಿ ಬಸ್‍ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಶಿಕ್ಷಕಿಯರು ಹಾಗೂ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ. ಇಂದು ಬೆಳಗ್ಗೆ ಶಹಾಪುರದಿಂದ ಕಲಬುರಗಿ ನಗರಕ್ಕೆ ಕೆಎಸ್‍ಆರ್‍ಟಿಸಿ ಬಸ್ ಬರುತ್ತಿತ್ತು. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕ್ರೀಡಾಂಗಣದ ಬಳಿ ಈ ಬಸ್‍ಗೆ ಕಲಬುರಗಿಯಿಂದ ದಾವಣಗೆರೆ ಕಡೆ ಹೋಗುತ್ತಿದ್ದ ಮತ್ತೊಂದು ಕೆಎಸ್‍ಆರ್‍ಟಿಸಿ ಬಸ್ ನಡುವೆ ನೋಡುನೋಡುತ್ತಿದ್ದಂತೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಒಂದು ಬಸ್‍ನ ಚಾಲಕ ಹಾಗೂ ಮೂವರು ಶಿಕ್ಷಕಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.

KSRTC-Accident--01

ಒಂದು ಮೂಲದ ಪ್ರಕಾರ ಏಕಾಏಕಿ ನಾಯಿಯೊಂದು ಅಡ್ಡ ಬಂದಿದ್ದು, ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮುಂದಾದಾಗ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೆ ರಾತ್ರಿ ಭಾರೀ ಮಳೆಯಾಗಿದ್ದು, ಇಳಿಜಾರು ರಸ್ತೆಯಾಗಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಒಂದು ಬಸ್ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದು ನಿಂತಿರುವುದು ಕಂಡುಬಂತು.

WhatsApp Image 2018-06-02 at 11.01.20 AM

ಅಪಘಾತದಲ್ಲಿ ಮೃತಪಟ್ಟವರು ಜೇವರ್ಗಿಯ ಯಾಳವಾರ ಶಾಲೆಯ ಶಿಕ್ಷಕಿಯರು ಎಂದು ಹೇಳಲಾಗಿದ್ದು, ಇಂದು ಶನಿವಾರವಾದ್ದರಿಂದ ಬೆಳಗ್ಗೆಯೇ ಶಾಲೆಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.  ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೇವರ್ಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

WhatsApp Image 2018-06-02 at 11.01.22 AM

WhatsApp Image 2018-06-02 at 11.01.25 AM

Facebook Comments

Sri Raghav

Admin