ಒಂದಲ್ಲ ಎರಡಲ್ಲ 4 ಮದುವೆಯಾಗಿ ಜೈಲು ಸೇರಿದ ಚಪಲ ಚೆನ್ನಿಗರಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.19-ಎಸ್ಸೆಸ್ಸೆಲ್ಸಿ ಓದಿದ ಭೂಪನೊಬ್ಬ ಹಲವಾರು ಹೆಸರುಗಳನ್ನು ಇಟ್ಟುಕೊಂಡು ನಾಲ್ವರು ಮಹಿಳೆಯರನ್ನು ಮದುವೆಯಾಗಿ ಎಲ್ಲರನ್ನೂ ಯಾಮಾರಿಸಿ ಕೊನೆಗೆ ಜೈಲುಪಾಲಾಗಿದ್ದಾನೆ.

ಮೈಸೂರು ನಗರದ ಸರಸ್ವತಿಪುರಂನ ಲಲಿತಾಧಿಪುರ ಹಿಂಭಾಗದ ಮನೆಯಲ್ಲಿ ವಾಸವಿದ್ದ ಎನ್.ಆರ್.ಗಣೇಶ್ ಅಲಿಯಾಸ್ ವಿಕ್ರಮ್ ಅಲಿಯಾಸ್ ಕಾರ್ತಿಕ್ ಅಲಿಯಾಸ್ ಹರೀಶ್‍ಕುಮಾರ್(45) ಎಂಬಾತನೇ ಬಂಧಿತ ಆರೋಪಿ.

ಎನ್.ಆರ್. ಗಣೇಶ್ 10ನೇ ತರಗತಿವರೆಗೆ ಓದಿದ್ದಾನೆ. ಆದರೆ ತನ್ನ ಚಾಣಾಕ್ಷತನದಿಂದ ಸಾಫ್ಟ್‍ವೇರ್ ಇಂಜಿನಿಯರ್‍ನ್ನು ಯಾಮಾರಿಸಿರುವುದು ವಿಪರ್ಯಾಸ. ಬ್ಯಾಂಕ್ ಲೋನ್, ಸೈಟ್, ಫ್ಲಾಟ್ ಕೊಡಿಸುವ ಕೆಲಸ ಮಾಡಿಕೊಂಡಿದ್ದ ಆರೋಪಿ ಅಸಹಾಯಕ ಹೆಣ್ಣುಮಕ್ಕಳು, ವಿಧವೆಯರನ್ನು ಹಾಗೂ ವಯೋವೃದ್ದರನ್ನು ವಂಚಿಸಿರುವುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.

ಮೊದಲ ಬಾರಿಗೆ 15 ವರ್ಷಗಳ ಹಿಂದೆ ರಾಜಾಜಿನಗರದ ಸವಿತಾ.ಆರ್ ಎಂಬುವರನ್ನು ಗಣೇಶ್ ಮದುವೆಯಾಗಿದ್ದ. ಈಕೆ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದರು. ಈಕೆಗೆ ಗೊತ್ತಾಗದಂತೆ 7 ವರ್ಷಗಳ ಹಿಂದೆ ಮಡಿಕೇರಿ ಮೂಲದ ಶ್ರೀಮತಿ ಗಾಯತ್ರಿ ಅಲಿಯಾಸ್ ಸುಚಿತ್ರ ಎಂಬುವರನ್ನು ಮದುವೆಯಾಗಿದ್ದಾನೆ. ಈಕೆ ಗೃಹಿಣಿಯಾಗಿದ್ದು, ಮೈಸೂರಿನಲ್ಲಿ ವಾಸವಾಗಿದ್ದಾರೆ.

ಇಷ್ಟಕ್ಕೆ ನಿಲ್ಲದ ಗಣೇಶ್‍ನ ವಂಚನೆ ದಾಹ ಮ್ಯಾಟ್ರಿಮೋನಿಯಲ್ ಪ್ರೊಫೈಲ್‍ಗಳತ್ತ ಹರಿದಿದೆ. ಬ್ರಾಹ್ಮಿ ಮ್ಯಾಟ್ರಿಮೋನಿಯಲ್‍ನಲ್ಲಿ ರಿಜಿಸ್ಟ್ರರ್ ಮಾಡಿಕೊಂಡು ಅಮಾಯಕ ಹೆಣ್ಣುಮಕ್ಕಳ ಶೋಧ ಆರಂಭಿಸಿದ್ದಾನೆ.

ಸಾಫ್ಟ್‍ವೇರ್ ಇಂಜಿನಿಯರ್ ಆಗಿರುವ ಲಲಿತ ಅವರನ್ನು ಪರಿಚಯ ಮಾಡಿಕೊಂಡು 2018ರಲ್ಲಿ ಮದುವೆಯಾಗಿದ್ದಾನೆ. ಕೆಲ ದಿನಗಳಲ್ಲೇ ಅವರಿಗೆ ವಿಚ್ಛೇಧನ ನೀಡಿದ್ದಾನೆ. 2019ರಲ್ಲಿ ಇದೇ ಮ್ಯಾಟ್ರಿಮೋನಿಯಲ್ ಮೂಲಕ ಆಶಾ ಎಂಬುವರನ್ನು ಪರಿಚಯ ಮಾಡಿಕೊಂಡು 4ನೇ ಮದುವೆಯಾಗಿದ್ದಾನೆ.

ಈತನ ಮೇಲೆ ಅನುಮಾನಗೊಂಡ ವಿಚ್ಛೇಧಿತ ಲಲಿತಾ ಅವರು ಪೂರ್ವಚರಿತ್ರೆಯನ್ನು ವಿಚಾರಿಸಿದಾಗ ಒಟ್ಟು ನಾಲ್ವರನ್ನು ಮದುವೆಯಾಗಿ ಯಾಮಾರಿಸಿರುವುದು ಸ್ಪಷ್ಟವಾಗಿದೆ. ತಕ್ಷಣ ಲಲಿತಾ ಅವರು ಯಶವಂತಪುರದ ಆರ್‍ಎಂಸಿ ಯಾರ್ಡ್ ಠಾಣೆ ಪೆÇಲೀಸರಿಗೆ ದೂರು ನೀಡಿದ್ದಾರೆ.

ವಿಧವೆ, ಅಸಹಾಯಕ ಹೆಣ್ಣುಮಕ್ಕಳು, ವಯೋವೃದ್ದರು, ಅಂಗವಿಕಲರು, ಮಹಿಳೆಯರಿಗೆ ಬ್ಯಾಂಕ್‍ನಲ್ಲಿ ಲೋನ್ ಹಾಗೂ ಸೈಟು ಅಥವಾ ಫ್ಲಾಟ್‍ಗಳನ್ನು ಬಾಡಿಗೆ ಹಾಗೂ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿರುವ ವಿಚಾರ ತನಿಖೆಯಿಂದ ತಿಳಿದುಬಂದಿದೆ.

ಈತನಿಂದ ಸಾಕಷ್ಟು ಮಂದಿ ಮೋಸ ಹೋಗಿರುವ ಸಾಧ್ಯತೆಗಳಿವೆ. ಅಸಹಾಯಕ ಹೆಣ್ಣುಮಕ್ಕಳನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಯಾಮಾರಿಸಿರುವ ಮಾಹಿತಿಗಳಿದ್ದು, ಈತನಿಂದ ವಂಚನೆಗೊಳಗಾದವರು ಆರ್‍ಎಂಸಿಯಾರ್ಡ್ ಠಾಣೆಯನ್ನು ಸಂಪರ್ಕಿಸುವಂತೆ ಪೆÇಲೀಸರು ಮನವಿ ಮಾಡಿದ್ದಾರೆ.

Facebook Comments

Sri Raghav

Admin