40ಕ್ಕೂ ಹೆಚ್ಚು ಹಾಲಿ-ಮಾಜಿ ಶಾಸಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramiah-02

ಬೆಂಗಳೂರು, ಆ.23– ಈ ಬಾರಿ ಇಪ್ಪತ್ತಕ್ಕೂ ಹೆಚ್ಚು ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿರುವ ಅಭ್ಯರ್ಥಿಗಳಿಗೂ ಇವುಗಳಲ್ಲಿ ಅವಕಾಶ ಕಲ್ಪಿಸಲು ಮುಂದಾಗಿದ್ದು, ಕೆಪಿಸಿಸಿ ಅಧ್ಯಕ್ಷರ ಜೊತೆ ಇದೇ 26 ರಂದು ದೆಹಲಿಗೆ ದೌಡಾಯಿಸಲಿದ್ದಾರೆ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ವಂಚಿತರಾಗಿದ್ದ ಹಲವು ಶಾಸಕರು ಸೇರಿದಂತೆ ಮೂರಕ್ಕೂ ಹೆಚ್ಚು ಬಾರಿ ಗೆಲುವು ಸಾಧಿಸಿರುವ ಶಾಸಕರಿಗೆ ಪ್ರಮುಖ ನಿಗಮ ಮಂಡಳಿಗಳ ಸ್ಥಾನಗಳನ್ನು ನೀಡುವ ಸೂತ್ರ ಹೆಣೆಯಲಾಗಿದೆ.  ಈ ಸಂಬಂಧ ಇದೇ 26 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನವದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 30:30:40 ಅನುಪಾತದ ಮೇಲೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ತುಂಬ ನಿರ್ಧರಿಸಲಾಗಿದೆ.

ಶೇ.30ರಷ್ಟು ಶಾಸಕರಿಗೆ, ಶೇ.30ರಷ್ಟು ಕಡಿಮೆ ಅಂತರದಲ್ಲಿ ಸೋತವರಿಗೆ, ಶೇ.40ರಷ್ಟು ಕಾರ್ಯಕರ್ತರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲು ತೀರ್ಮಾನಿಸಿದ್ದು, ಇದಕ್ಕೆ ಹೈಕಮಾಂಡ್ ಒಪ್ಪಿಗೆ ಪಡೆಯಲು ಸದ್ಯದಲ್ಲೇ ದೆಹಲಿಗೆ ದೌಡಾಯಿಸಲಿದ್ದಾರೆ.  ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ನರೇಂದ್ರಸ್ವಾಮಿ, ಗೋಪಾಲ ಪೂಜಾರಿ, ಮನೋಹರ್ ತಹಸೀಲ್ದಾರ್, ಬಿ.ಆರ್.ಯಾವಗಲ್, ಬಿ.ಜಿ.ಗೋವಿಂದಪ್ಪ, ಶ್ರೀನಿವಾಸ್, ಡಾ.ಸುಧಾಕರ್, ತುಕಾರಾಮ್, ಬಿ.ಡಿ.ಇನಾಂದಾರ್,  ಸಿದ್ದು ನ್ಯಾಮೇಗೌಡ, ಆರ್.ದೇವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಶಿವಾನಂದಪಾಟೀಲ್ ಸೇರಿದಂತೆ ಬಹುತೇಕರು ನಿಗಮ ಮಂಡಳಿಗಳ ಅಧ್ಯಕ್ಷರಾಗಲಿದ್ದಾರೆ.

ಇದಲ್ಲದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರ ಸೇವೆಯನ್ನು ಪರಿಗಣಿಸಿ ನಿಗಮ ಮಂಡಳಿಗಳ ಹುದ್ದೆಯನ್ನು ಪ್ರಾದೇಶಿಕವಾರು, ಜಾತಿವಾರು, ಸಾಮಾಜಿಕ ನ್ಯಾಯದಡಿಯಲ್ಲಿ ನೀಡಲು ನಿರ್ಧರಿಸಲಾಗಿದೆ.  ಮಂತ್ರಿ ಸ್ಥಾನ ಪಡೆಯಲು ವಿಫಲರಾದವರಿಗೆ ಆಯಾಕಟ್ಟಿನ ನಿಗಮ ಮಂಡಳಿಗಳ ಅಧ್ಯಕ್ಷಗಿರಿಯನ್ನು ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇರುವವರಿಗೂ ಕೂಡ ಅಧಿಕಾರ ಒದಗಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಘಟಕಗಳಿಂದ ಶಿಫಾರಸ್ಸಾಗಿ ಬರುವ ಹೆಸರುಗಳಿಗೆ ಮೊದಲ ಆದ್ಯತೆ ಕೊಡಲಾಗುವುದು.

ಒಟ್ಟಾರೆ ನಿನ್ನೆ ಮೊದಲ ಸುತ್ತಿನ ಮಾತುಕತೆ ನಡೆಸಿದ್ದು, ಇಂದು ಅಥವಾ ನಾಳೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಲಿರುವ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ.  ಕಳೆದ ಬಾರಿ ಎಲ್ಲಾ ನಿಗಮ ಮಂಡಳಿಗಳನ್ನು ಪಕ್ಷದ ಕಾರ್ಯಕರ್ತರಿಗೆ ನೀಡಲಾಗಿತ್ತು. ಈ ಬಾರಿ ಶಾಸಕರಿಗೂ ನೀಡಬೇಕೆಂದು ಸಿಎಂ ಸಿದ್ದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin