400 ಕೋಟಿ ಜನರಲ್ಲಿ ಒಬ್ಬರಿಗೆ ಗೋಚರಿಸುತ್ತದೆ ಈ ವಿರಳಾತಿ ವಿರಳ ರೋಗ..!

ಈ ಸುದ್ದಿಯನ್ನು ಶೇರ್ ಮಾಡಿ

Rare

ಅಲಹಾಬಾದ್, ಮೇ 6-ಅಲಹಾಬಾದ್‍ನ 21 ರೂಪೇಶ್ ಅತ್ಯಂತ ಅಪರೂಪದಲ್ಲೇ ಅತಿ ಅಪರೂಪದ ಮತ್ತು ಗುಣಪಡಿಸಲಾಗದ ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದಾನೆ. ಪ್ರಪಂಚದ 400 ಕೋಟಿ ಜನರಲ್ಲಿ ಒಬ್ಬರಿಗೆ ಈ ವಿರಳಾತಿ ವಿರಳ ಅನುವಂಶೀಯ ದೋಷ ರೋಗ ಇರುತ್ತದೆ ಎಂಬುದು ಅಚ್ಚರಿಯ ಸಂಗತಿ ಮತ್ತು ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ಉತ್ತರಪ್ರದೇಶದ ಅಲಹಾಬಾದ್‍ನ ಹೊರವಲಯದ ಗ್ರಾಮದಲ್ಲಿ ನೆಲೆಸಿರುವ ರೂಪೇಶ್ ಹಚ್ಚಿಸನ್-ಗಿಲ್‍ಫೋರ್ಡ್ ಪ್ರೊಗೆರಿಯಾ ಸಿಂಡ್ರೋಮ್ (ಎಚ್‍ಜಿಪಿಎಸ್) ಅಥವಾ ಪ್ರೊಗೆರಿಯಾ ರೋಗದಿಂದ ಬಳಲುತ್ತಿದ್ದಾನೆ. ಇದನ್ನು ಅಕಾಲ ವೃದ್ಧಾಪ್ಯ ಉಂಟು ಮಾಡುವ ರೋಗ ಎನ್ನುತ್ತಾರೆ. ಈ ರೋಗದಿಂದ ನರಳುತ್ತಿರುವವರು ಬೆಳವಣಿಗೆಯಾಗದೇ ಮಕ್ಕಳಂತೆ ಕಾಣುತ್ತಾರಾದರೂ ಅಕಾಲಿಕ ವೃದ್ಯಾಪ್ಯದಿಂದ ಬಳಲುತ್ತಿರುತ್ತಾರೆ.ಕುಬ್ಜ ಕೃಶ ದೇಹ, ದೊಡ್ಡದಾಗಿ ಬೆಳೆದು ಮುಂದಕ್ಕೆ ಚಾಚಿಕೊಂಡಿರುವ ದೊಡ್ಡ ಬಕ್ಕ ತಲೆ, ಪುಟ್ಟ ಮುಖ, ಸುಕ್ಕಾದ ಚರ್ಮ, ಗುಳಿ ಬಿದ್ದ ಕಣ್ಣುಗಳು, ಮೊಟುಕಾದ ಮೂಗು, ವಿಚಿತ್ರ ಹಲ್ಲುಗಳು-ಈ ರೋಗ ಲಕ್ಷಣಗಳು.   ಪ್ರೊಗೆರಿಯಾ ರೋಗಕ್ಕೆ ಒಳಗಾದವರು ಕೇವಲ 14 ರಿಂದ 15 ವರ್ಷಗಳ ಕಾಲ ಬದುಕಿ ಉಳಿಯುತ್ತಾರೆ. ಆದರೆ 21 ವರ್ಷದ ರೂಪೇಶ್ ಇದಕ್ಕೆ ಅಪವಾದದಂತಿದ್ದಾನೆ ಎನ್ನುತ್ತಾರೆ ವೈದ್ಯರು.   ಈ ರೋಗ ಹೊಂದಿರುವವರು ತೀವ್ರ ಅನಾರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಪದೇ ಪದೇ ಕಾಣಿಸಿಕೊಳ್ಳುವ ತಲೆಶೂಲೆ, ನಡೆದಾಡುವಾಗ ವಿಪರೀತ ನೋವು ತೀರಾ ಸಾಮಾನ್ಯ. ಇದಕ್ಕಿಂತ ದೊಡ್ಡ ಯಾತನೆ ಎಂದರೆ ತನ್ನನ್ನು ನೋಡಿ ನಗುವವರನ್ನು ಎದುರಿಸಬೇಕಾದ ಸಂಕಷ್ಟ ಸ್ಥಿತಿ.

ಈತನ ತಂದೆ ರಮಾಪತಿ ಆಟೋರಿಕ್ಷಾ ಚಾಲಕ. ಒಂದೆಡೆ ಬಡತನ ಮತ್ತೊಂದೆಡೆ ಮುಗ್ಧ ರೂಪೇಶ್‍ಗೆ ಅಮರಿಕೊಂಡಿರುವ ವಾಸಿಮಾಡಲಾಗದ ಮಹಾರೋಗ ಕುಟುಂಬವನ್ನು ಜರ್ಜಿರಿತಗೊಳಿಸಿದೆ.  ಕೆಲವು ತಿಂಗಳ ಹಿಂದೆ ಸರ್ಕಸ್ ಕಂಪನಿಯೊಂದರ ಮಂದಿ ರಮಾಪತಿಯನ್ನು ಭೇಟಿಯಾಗಿ ರೂಪೇಶ್‍ನನ್ನು ತಮಗೆ ನೀಡಿ, ಇದಕ್ಕೆ ಪ್ರತಿಫಲವಾಗಿ 7 ಲಕ್ಷ ರೂ.ಗಳನ್ನು ನೀಡುವುದಾಗಿ ಒತ್ತಾಯಿಸಿದ್ದರು. ಆದರೆ ರೋಗಗ್ರಸ್ತ ಮಗನ ಮೇಲಿನ ಅಪಾರ ಮಮತೆಯಿಂದಾಗಿ ಸೌಜನ್ಯವಾಗಿಯೇ ಈ ಪ್ರಸ್ತಾವವನ್ನು ಅವರು ತಿರಸ್ಕರಿಸಿದ್ದರು.   ತಂದೆಯೊಂದಿಗೆ ತಾಯಿ ಶಾಂತಿ ದೇವಿ ಮತ್ತು ಸಹೋದರ ವಕೀಲ್, ರೂಪೇಶ್‍ನ ಬೆಂಬಲಕ್ಕೆ ಎಲ್ಲ ರೀತಿಯ ತ್ಯಾಗ ಮಾಡುತ್ತಿದ್ದಾರೆ.

ವೈದ್ಯ ಡಾ. ಗಿರೀಶ್ ಪಾಂಡೆ ರೂಪೇಶ್‍ಗೆ ಆಧಾರವಾಗಿದ್ದಾರೆ. ಅಶುತೋಷ್ ಮೊಮೊರಿಯಲ್ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಡಾ ಗಿರೀಶ್ ಆತನಿಗೆ ಅಗತ್ಯವಾದ ಎಲ್ಲ ರೀತಿಯ ನೆರವು ನೀಡುತ್ತಿದ್ದಾರೆ. ಔಷಧಿಗಳನ್ನು ಉಚಿತವಾಗಿ ಒದಗಿಸುತ್ತಿದ್ದಾರೆ.   ಈತನ ದುಬಾರಿ ಚಿಕಿತ್ಸೆಗೆ ನೆರವಾಗಲು ತಾಯಿ ಮತ್ತು ಸಹೋದರ ಅಲಹಾಬಾದ್ ಜಿಲ್ಲಾ ದಂಡಾಧಿಕಾರಿಯವರ ಕಚೇರಿಗೆ ತೆರಳಿ ಮನವಿ ಮಾಡಿದ್ದಾರೆ. ಅಗತ್ಯವಾದ ನೆರವು ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿದೆ.   ಉತ್ತರ ಪ್ರದೇಶ ಆರೋಗ್ಯ ಸಚಿವ ಸಿದ್ದಾರ್ಥನಾಥ್ ಸಿಂಗ್ ರೂಪೇಶ್‍ಗೆ ಚಿಕಿತ್ಸೆಗೆ ಎಲ್ಲ ನೆರವು ನೀಡಬೇಕೆಂದು ಆದೇಶ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣಕಾಸು ಸಹಾಯ ದೊರಕಿರುವುದು ಸಮಾಧಾನಕರ ಸಂಗತಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin