ಶಾಕಿಂಗ್ : ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.21- ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆಯುವ ಮುನ್ನವೇ 4000ಕ್ಕೂ ಹೆಚ್ಚು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಇತಿಹಾಸದ ನಂಬರ್ ಒನ್ ಟ್ರಾನ್ಸ್ ಸರ್ಕಾರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಐಎಎಸ್,ಐಪಿಎಸ್,ಕೆಎಎಸ್ ಹಾಗೂ ಸಹಕಾರ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಭಾರೀ ಪ್ರಮಾಣದ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು ಆ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಯಾವೊಂದು ಸರ್ಕಾರವೂ ಅಧಿಕಾರಕ್ಕೆ ಬರಬರುತ್ತಿದ್ದಂತೆಯೇ ಇಷ್ಟು ವರ್ಗಾವಣೆ ನಡೆಸಿರಲಿಲ್ಲ ಎಂಬ ದಾಖಲೆ ಸೃಷ್ಟಿಯಾಗಿದೆ.

ವಿಧಾನಸೌಧದ ಸಚಿವಾಲಯಗಳಲ್ಲೂ ಭಾರೀ ಪ್ರಮಾಣದ ನೌಕರರನ್ನು ವರ್ಗಾವಣೆ ಮಾಡಲಾಗಿದ್ದು ನಿರ್ದಿಷ್ಟ ಜಾಗಕ್ಕೆ ಇಂತಿಂತವರೇ ಬರಬೇಕು ಎಂದು ಸರ್ಕಾರ ಬಯಸಿರುವುದು ಸ್ಪಷ್ಟವಾಗಿದೆ. ಯಡಿಯೂರಪ್ಪ ಸರ್ಕಾರ ವರ್ಗಾವಣೆ ವಿಷಯದಲ್ಲಿ ಬರೆದಿರುವ ಈ ಅಪೂರ್ವ ದಾಖಲೆ ಇದೇ ರೀತಿ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ವರ್ಗಾವಣೆಯಾದ ನೌಕರರ ಸಂಖ್ಯೆ ಐದು ಸಾವಿರ ಮೀರುತ್ತದೆ. ಶಿಕ್ಷಣ ಇಲಾಖೆಯ ವರ್ಗಾವಣೆಗಳು ಅಧಿಕಾರಿಗಳ ಮಟ್ಟದಲ್ಲೇ ನಡೆಯುವುದರಿಂದ ಈ ದಾಖಲೆಯಲ್ಲಿ ಶಿಕ್ಷಕರು ಸೇರ್ಪಡೆಯಾಗಿಲ್ಲ.

ರಾಜ್ಯದಲ್ಲಿ ನೆರೆ ಬಂದು ಮೂವತ್ತೈದು ಸಾವಿರ ಕೋಟಿ ರೂಗಳಷ್ಟು ನಷ್ಟವಾದರೂ ಪರಿಹಾರದ ರೂಪದಲ್ಲಿ ಕೇವಲ 431 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು ಉಳಿದಂತೆ ಕೇಂದ್ರ ಸರ್ಕಾರ ಇನ್ನೂ ಅಂಗೈಯಲ್ಲೇ ಪರಿಹಾರದ ಬೆಣ್ಣೆ ತೋರಿಸುತ್ತಿದೆ. ರೈತರ ಸಾಲ ಮನ್ನಾ ಸೇರಿದಂತೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೈಗೊಂಡ ನಿರ್ಣಯಗಳಿಗೆ ಹಣ ಒದಗಿಸಿರುವುದು ಸೇರಿದಂತೆ ವಿವಿಧ ಬಾಬ್ತುಗಳಿಗೆ ನಿಗದಿಯಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಕಷ್ಟವಾಗಿದ್ದು ಇದು ಕೂಡಾ ಯಡಿಯೂರಪ್ಪ ಸರ್ಕಾರದ ಮುಂದಿನ ದಾರಿಯನ್ನು ಅಸ್ಪಷ್ಟಗೊಳಿಸಿದೆ.

ಅಭಿವೃದ್ಧಿ ಕಾರ್ಯಗಳಿಗೆ,ನೆರೆ ಹಾಗೂ ಬರಪರಿಹಾರ ಕಾಮಗಾರಿಗಳಿಗೆ ಕೇಂದ್ರದಿಂದ ನೆರವು ಬರದೆ ರಾಜ್ಯ ಸರ್ಕಾರ ಏನೂ ಮಾಡುವ ಸ್ಥಿತಿಯಲ್ಲಿಲ್ಲ.ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸರ್ಕಾರದ ಮಂತ್ರಿಗಳನೇಕರು ಹೋದಲ್ಲಿ,ಬಂದಲ್ಲಿ ಭರವಸೆಗಳ ಮಹಾಪೂರವನ್ನು ಹರಿಸಿಬರಬೇಕಾಗಿದೆಯೇ ಹೊರತು ವಾಸ್ತವದಲ್ಲಿ ಖಜಾನೆಗೆ ಲವಣಯುಕ್ತ ನೀರಿನ ಕೊರತೆಯಿಂದ ಬಳಲುತ್ತಿರುವುದು ಸ್ಪಷ್ಟವಾಗಿದೆ.

ಈ ನಡುವೆಯೇ ಸರ್ಕಾರಿ ಅಧಿಕಾರಿಗಳು,ನೌಕರರ ವರ್ಗಾವಣೆ ಪ್ರಕ್ರಿಯೆ ಅವ್ಯಾಹತವಾಗಿ ಸಾಗಿದ್ದು ಸರ್ಕಾರ ಹಾಗೂ ಸರ್ಕಾರದ ಮೇಲೆ ಪ್ರಭಾವವಿರುವ ಸಂಘಟನೆಯ ನಡುವೆ ಕಚ್ಚಾಟ ದೊಡ್ಡ ಮಟ್ಟದಲ್ಲಿ ನಡೆದಿದೆ. ವರ್ಗಾವಣೆ ಪ್ರಕ್ರಿಯೆ ಇಷ್ಟು ದೊಡ್ಡ ಮಟ್ಟದಲ್ಲಿ ಆಗಬೇಕಿರಲಿಲ್ಲ.ಆದರೆ ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಇಂತಿಂತವರೇ ಬಂದು ಕೂರಬೇಕು ಎಂದು ಸಂಘಟನೆ ಸಿಗ್ನಲ್ ರವಾನಿಸುತ್ತದೆ.

ಅದರ ಮಾತನ್ನು ಕೇಳಿದರೂ ಕಷ್ಟ.ಕೇಳದಿದ್ದರೂ ಕಷ್ಟ.ಹೀಗಾಗಿ ಅವರು ಹೇಳಿದ್ದನ್ನೂ ಗಮನದಲ್ಲಿಟ್ಟುಕೊಂಡು ತಮಗೆ ಅನುಕೂಲಕರವಾದ ಆಡಳಿತ ಯಂತ್ರವನ್ನು ರೂಪಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪರದಾಡಬೇಕಿದೆ ಎಂದು ಮೂಲಗಳು ವಿವರ ನೀಡಿವೆ. 1989 ರಿಂದ 1994 ರವರೆಗಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಭಾರೀ ಸದ್ದು ಮಾಡಿತ್ತಾದರೂ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಪೂರ್ಣವಾಗುವಷ್ಟರಲ್ಲಿ ಅದು ಇಷ್ಟೊಂದು ವರ್ಗಾವಣೆಗಳನ್ನು ಮಾಡಿರಲಿಲ್ಲ.

ಹೀಗಾಗಿ ಅತ್ಯಂತ ಹೆಚ್ಚು ವರ್ಗಾವಣೆ ಪ್ರಕ್ರಿಯೆ ನಡೆದ ಕೆಲ ಸರ್ಕಾರಗಳ ದಾಖಲೆಯನ್ನು ಇದೀಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುರಿದು ಹಾಕಿದ್ದು ಆ ಮೂಲಕ ಇತಿಹಾಸದ ನಂಬರ್ ಒನ್ ಟ್ರಾನ್ಸ್‍ಫರ್ ಸರ್ಕಾರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೂಲಗಳ ಪ್ರಕಾರ,ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ದೊಡ್ಡ ಮಟ್ಟದಲ್ಲಿ ನಡೆಯುತ್ತದಾದರೂ ಇಷ್ಟು ಕಡಿಮೆ ಅವಧಿಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವರ್ಗಾವಣೆಯಾದ ಇತಿಹಾಸವಿಲ್ಲ.ಹೀಗಾಗಿ ಈ ಬಾರಿಯ ಮಳೆಗೂ,ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಗೂ ಒಂದು ರೀತಿಯಲ್ಲಿ ಸಾಮ್ಯತೆ ಇದೆ.

ಯಾಕೆಂದರೆ ವರ್ಗಾವಣೆ ಪ್ರಕ್ರಿಯೆಗೆ ನಿಗದಿ ಮಾಡಿದ ದಿನಗಳಲ್ಲಿ ಹೆಚ್ಚು ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿದ್ದವು.ಆದರೆ ಅಂತಹ ವರ್ಗಾವಣೆ ಪ್ರಕ್ರಿಯೆ ಈಗ ಕೆಲವೇ ವಾರಗಳಲ್ಲಿ ನಡೆದು ಹೋಗಿದೆ.ಹೀಗಾಗಿ ಅದರ ಭಾರವನ್ನು ತಡೆಯಲು ಆಡಳಿತ ಯಂತ್ರಕ್ಕೆ ಕಷ್ಟವಾಗುತ್ತಿದೆ ಎಂಬುದು ಮೂಲಗಳ ಹೇಳಿಕೆ.

Facebook Comments

Sri Raghav

Admin