BREAKING : ದೇಶದಲ್ಲಿ 40,000 ದಾಟಿದ ಕೊರೋನಾ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮೇ 3- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಮ್ಮಾರಿ ನಿಗ್ರಹಕ್ಕಾಗಿ ಶತ ಪ್ರಯತ್ನಗಳನ್ನು ಮುಂದುವರಿಸಿದ್ದರೂ, ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ನಿನ್ನೆ ಒಂದೇ ದಿನ ದೇಶದ ವಿವಿಧೆಡೆ 2,293 ಮಂದಿಯಲ್ಲಿ ದಾಖಲೆ ಪ್ರಮಾಣದ ಸೋಂಕು ಪತ್ತೆಯಾಗಿರುವುದು ಪರಿಸ್ಥಿತಿಯನ್ನು ಅಯೋಮಯವಾಗಿಸಿದೆ.

ಇಂದು ಭಾರತದಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆ 40,000 ದಾಟಿದೆ. ಕಿಲ್ಲರ್ ಕೊರೊನಾ ನಿಗ್ರಹಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎರಡನೇ ಹಂತದ ಲಾಕ್‍ಡೌನ್ ಇಂದು ಅಂತ್ಯಗೊಳ್ಳಲಿದೆ. 40 ದಿನಗಳ ಭಾರತ ದಿಗ್ಬಂಧನದ ನಂತರ ನಾಳೆಯಿಂದ 17ರ ವರೆಗೆ 14 ದಿನಗಳ ಲಾಕ್-3 ಜಾರಿಗೆ ಬರಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಮ್ಮಾರಿ ನಿಗ್ರಹಕ್ಕಾಗಿ ಶತ ಪ್ರಯತ್ನಗಳನ್ನು ಮುಂದುವರಿಸಿದ್ದರೂ, ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಸರಾಸರಿ ಶೇ.25ರಷ್ಟು (10,632 ಮಂದಿ ಗುಣಮುಖ) ಸುಧಾರಣೆ ಕಂಡುಬಂದಿದ್ದರೂ, ಮತ್ತೊಂದೆಡೆ ದಿನನಿತ್ಯ ಮರಣ ಮತ್ತು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ದೇಶದ ಜನರನ್ನು ಚಿಂತಾಕ್ರಾಂತವನ್ನಾಗಿ ಮಾಡಿದೆ.

24 ತಾಸುಗಳ ಅವಧಿಯಲ್ಲಿ ದೇಶದ ವಿವಿಧೆಡೆ 2,067 ಮಂದಿಯಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ, ನಿನ್ನೆ 93 ಮಂದಿಯನ್ನು ಮಹಾಮಾರಿ ನುಂಗಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಭಾರತದಲ್ಲಿ ಮೃತರ ಸಂಖ್ಯೆ 1,301ಕ್ಕೇರಿದೆ. ಮತ್ತೊಂದಡೆ ಸೋಂಕು ಪೀಡಿತರ ಸಂಖ್ಯೆ 39,980ಕ್ಕೇರಿದೆ.

ಕೆಲವು ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಪತ್ರಿಕೆ ಮುದ್ರಣಕ್ಕೆ ಹೋಗುವುದಕ್ಕೆ ಮುನ್ನ ಲಭಿಸಿದ ಮಾಹಿತಿ ಪ್ರಕಾರ ಪಾಸಿಟಿವ್ ಪ್ರಕರಣಗಳ ಸಂಖ್ಯೆ 40,000 ದಾಟಿದೆ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 28,046ರಷ್ಟಿದೆ. ಈ ಮಧ್ಯೆ, ಈವರೆಗೆ 10,632 ಮಂದಿ ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದೆಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ.

ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಆಂಧ್ರಪ್ರದೇಶ, ಓಡಿಶಾ, ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.ಈವರೆಗೆ ಸಂಭವಿಸಿರುವ 1,301 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಒಟ್ಟು 521 ಸಾವುಗಳು ವರದಿಯಾಗಿವೆ.

ನಂತರದ ಸ್ಥಾನಗಳಲ್ಲಿ ಗುಜರಾತ್ (362), ಮಧ್ಯಪ್ರದೇಶ (151), ರಾಜಸ್ತಾನ (65), ದೆಹಲಿ (64), ಉತ್ತರ ಪ್ರದೇಶದ (41), ಪಶ್ಚಿಮ ಬಂಗಾಳ-ಮತ್ತು ಆಂಧ್ರಪ್ರದೇಶ (33), ತಮಿಳುನಾಡು (29), ತೆಲಂಗಾಣ(28), ಕರ್ನಾಟಕ (25) ಹಾಗೂ ಪಂಜಾಬ್ (20) ರಾಜ್ಯಗಳಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಟು, ಕೇರಳ, ಬಿಹಾರ ಮತ್ತು ಹರಿಯಾಣದಲ್ಲಿ ತಲಾ ನಾಲ್ಕು, ಜಾರ್ಖಂಡ್ ಮೂರು, ಮೇಘಾಲಯ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಅಸ್ಸಾಂ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.

ಇನ್ನು ಹಲವು ರಾಜ್ಯಗಳಲ್ಲಿ ಕಳೆದ 12 ತಾಸುಗಳ ಅವಧಿಯಲ್ಲಿ ಹೊಸ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ.ಮಹಾರಾಷ್ಟ್ರದಲ್ಲಿ ಸೋಂಕು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನಾಸಿಕ್‍ನಲ್ಲಿ ಇಂದು ಮತ್ತೆ 27 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಜಿಲ್ಲೆಯಲ್ಲಿ ಈವರೆಗೆ 360 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ದೆಹಲಿ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಆಂಧ್ರಪ್ರದೇಶ, ಒಡಿಶಾ ರಾಜ್ಯಗಳಲ್ಲೂ ಹೊಸ ಸಾಂಕ್ರಮಿಕ ಪ್ರಕರಣಗಳು ದಾಖಲಾಗಿವೆ.

Facebook Comments

Sri Raghav

Admin