410 ಗೆಜೆಟೆಡ್‌ ಪ್ರೊಬೆಷನರ್‌ಗಳ ನೇಮಕಾತಿಗೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

Job-Updates

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 410 ಗೆಜೆಟೆಡ್‌ ಪ್ರೊಬೆಷನರ್‌ಗಳ ಗ್ರೂಪ್‌– ಎ ಮತ್ತು ಗ್ರೂಪ್‌ –ಬಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ಖಾಲಿ ಹುದ್ದೆಗಳ ಕುರಿತು ವಿವಿಧ ಇಲಾಖೆಗಳಿಂದ ಬಂದ ಮಾಹಿತಿಯನ್ನು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಡಿಪಿಎಆರ್‌) ಪರಿಶೀಲಿಸುತ್ತಿದ್ದು, ಶೇ 33 ಮಹಿಳಾ ಮೀಸಲಾತಿ ನಿಗದಿಪಡಿಸಿ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.  ನೇಮಕಾತಿ ಸಂಬಂಧಿಸಿದ ಪ್ರಸ್ತಾವನೆಯನ್ನು ಡಿಪಿಎಆರ್‌  ಕೆಲವೇ ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ. ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ಸಿಕ್ಕಿದ ತಕ್ಷಣ ಕರ್ನಾಟಕ ಲೋಕಾ ಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಲಿದೆ. ಸೆಪ್ಟೆಂಬರ್‌ನಲ್ಲಿ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.
‘ತಹಶೀಲ್ದಾರ್‌, ಸಹಾಯಕ ಆಯುಕ್ತ (ವಾಣಿಜ್ಯ ತೆರಿಗೆ) ಮತ್ತು ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ’ ಎಂದು ಡಿಪಿಎಆರ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಕೆಎಎಸ್‌ ಹುದ್ದೆಗಳಿಗೆ ಮುಕ್ತ, ನಿಷ್ಪಕ್ಷಪಾತ ಮತ್ತು ಅರ್ಹತೆ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೆಪಿಎಸ್‌ಸಿಯಲ್ಲಿ ಜಾರಿಯಲ್ಲಿರುವ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಸರ್ಕಾರ ಪಿ.ಸಿ. ಹೋಟಾ ಸಮಿತಿ ರಚಿಸಿತ್ತು. ಈ ಸಮಿತಿಯ ಶಿಫಾರಸಿನ ಅನ್ವಯ ನೇಮಕಾತಿ ನಿಯಮ ರೂಪಿಸಿದ ಬಳಿಕ ಮೊದಲ ಬಾರಿಗೆ ಗೆಜೆಟೆಡ್‌ ಪ್ರೊಬೆಷನರ್‌ಗಳ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಪ್ರಕ್ರಿಯೆ ಆರಂಭಿಸಿದೆ.
ಸಮಿತಿಯ ಶಿಫಾರಸಿನಂತೆ  ಸ್ಪರ್ಧಾತ್ಮಕ ಪರೀಕ್ಷಾ ನಿಯಮಗಳಿಗೆ ತಿದ್ದುಪಡಿ ಮಾಡಿ ಕರಡು ನಿಯಮಗಳ ಅಧಿಸೂಚನೆಯನ್ನು ಜೂನ್‌ 13ರಂದು ಗೆಜೆಟ್‌ನಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಈ ಅಧಿಸೂಚನೆಗೆ ಒಂಬತ್ತು ಆಕ್ಷೇಪಗಳು ಸಲ್ಲಿಕೆಯಾಗಿತ್ತು. ಮುಖ್ಯಪರೀಕ್ಷೆಯಲ್ಲಿ (ಲಿಖಿತ) ಗಳಿಸಿದ ಅಂಕಗಳನ್ನು ಗೋಪ್ಯವಾಗಿಟ್ಟು, ಆ ಅಂಕಗಳನ್ನು (ಅರ್ಹತೆ) ಪರಿಗಣಿಸಿ ವ್ಯಕ್ತಿತ್ವ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಹ್ವಾನಿಸುವ ಯಾದಿ ತಯಾರಿಸಲು ಅಧಿಸೂಚನೆಯಲ್ಲಿ ಪ್ರಸ್ತಾವಿಸಲಾಗಿತ್ತು.
ಇದಕ್ಕೆ ಕೆಪಿಎಸ್‌ಸಿ ಆಕ್ಷೇಪ ವ್ಯಕ್ತಪಡಿಸಿದೆ. ಗಳಿಸಿದ ಅಂಕಗಳ ಆಧಾರದಲ್ಲಿ ಯಾದಿ ತಯಾರಿಸಿದರೆ ಅತೀ ಹೆಚ್ಚು ಅಂಕ ಗಳಿಸಿದವರು ಮೊದಲು, ಬಳಿಕ ನಂತರದ ಅಂಕ ಗಳಿಸಿದ ಅಭ್ಯರ್ಥಿಗಳನ್ನು ಕ್ರಮವಾಗಿ ಆಹ್ವಾನಿಸಬೇಕಾಗುತ್ತದೆ. ಇದು ಅಕ್ರಮಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಹೀಗಾಗಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಅಥವಾ  ವರ್ಣಮಾಲೆಗೆ (ಆಲ್ಫಬೆಟಿಕ್‌) ಅನುಗುಣವಾಗಿ ವ್ಯಕ್ತಿತ್ವ ಪರೀಕ್ಷೆಗೆ ಆಹ್ವಾನಿಸುವುದೇ ಸೂಕ್ತ ಎಂದು ಅದು ಸೂಚಿಸಿದೆ.

ಗೆಜೆಟೆಡ್‌ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸಲು ಈ ವರ್ಷ ಆರಂಭದಲ್ಲಿ ಕೆಪಿಎಸ್‌ಸಿಗೆ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಬಳಿಕ ಮಹಿಳಾ ಮೀಸಲಾತಿ ನಿಯಮ ಪಾಲನೆಯಾಗದ ಕಾರಣ ನೇಮಕಾತಿ ಪ್ರಕ್ರಿಯೆ ಮುಂದೂಡಲಾಗಿತ್ತು. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಈ ಹಿಂದೆ ಶೇ 30 ಇದ್ದ ಮಹಿಳಾ ಮೀಸಲಾತಿಯನ್ನು ಶೇ 33ಕ್ಕೆ ಹೆಚ್ಚಿಸಿ ಇದೇ ಜನವರಿ 8ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ನೇಮಕಾತಿ ಪ್ರಕ್ರಿಯೆ ಆರಂಭಿಸುವ ಸಂದರ್ಭದಲ್ಲಿ ಹೊಸ ಮೀಸಲಾತಿ ನಿಯಮ ಪಾಲಿಸದೆ ಹಿಂದಿನ ಮಾನದಂಡಗಳ ಆಧಾರದಲ್ಲಿ  ಮೀಸಲಾತಿ ಪಟ್ಟಿ ಸಿದ್ಧಪಡಿಸಲಾಗಿತ್ತು. ಹೀಗಾಗಿ ನೇಮಕ ಪ್ರಕ್ರಿಯೆಯನ್ನೇ ಹಿಂದಕ್ಕೆ ಪಡೆಯಲಾಗಿತ್ತು.

ಎಲ್ಲ ಇಲಾಖೆಗಳಿಗೆ ಇತ್ತೀಚೆಗೆ ಪತ್ರ ಬರೆದಿದ್ದ ಡಿಪಿಎಆರ್, ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸಿ ಖಾಲಿ ಹುದ್ದೆಗಳ ಕುರಿತು ಮಾಹಿತಿ ನೀಡುವಂತೆ ಕೋರಿತ್ತು.  ಅದರಂತೆ 13 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಡಿಪಿಎಆರ್‌ ಕ್ರಮ ತೆಗೆದುಕೊಂಡಿದೆ.
‘2011ರಲ್ಲಿ ನಡೆದ ಗೆಜೆಟೆಡ್‌ ಪ್ರೊಬೆಷನರುಗಳ ಆಯ್ಕೆಯನ್ನು ಸರ್ಕಾರ ರದ್ದುಗೊಳಿಸಿದೆ. ಅಲ್ಲದೆ, ನಂತರ ಪರೀಕ್ಷಾ ಪಠ್ಯಕ್ರಮದಲ್ಲಿ ಕೆಪಿಎಸ್‌ಸಿ ಬದಲಾವಣೆ ತಂದಿದೆ. ಹೈದರಾಬಾದ್‌– ಕರ್ನಾಟಕ ವಿಶೇಷ ಮೀಸಲಾತಿ (371 ಜೆ), ಮಹಿಳಾ ಮೀಸಲಾತಿ ಗೊಂದಲದಿಂದ ಮೂರು ವರ್ಷ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ 2016ನೇ ಸಾಲಿನಲ್ಲಿ ನಡೆಯುವ ನೇಮಕಾತಿಯಲ್ಲಿ 2011ರಲ್ಲಿ ಪರೀಕ್ಷೆ ಬರೆದವರಿಗೆ ಮತ್ತೆ ಅವಕಾಶ ನೀಡಬೇಕು ಮತ್ತು ವಯೋಮಾನ ಸಡಿಲಿಸಬೇಕು’ ಎಂದು ಕೆಎಎಸ್‌ ಪರೀಕ್ಷಾ ಆಕಾಂಕ್ಷಿ ಎಸ್‌. ಕುಮಾರ್‌ ಆಗ್ರಹಿಸಿದರು.
*
‘ವ್ಯಕ್ತಿತ್ವ ಪರೀಕ್ಷೆ’ ಇನ್ನಷ್ಟು ವಿಳಂಬ ಸಾಧ್ಯತೆ
2015ರ ಜನವರಿಯಲ್ಲಿ  464 ಗೆಜೆಟೆಡ್‌ ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಈಗಾಗಲೇ ಮುಖ್ಯಪರೀಕ್ಷೆ ನಡೆದು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾದವರ ಪಟ್ಟಿ ಪ್ರಕಟಿಸಲಾಗಿದೆ.  ಹೋಟಾ ಸಮಿತಿ ಶಿಫಾರಸಿನ ಅನ್ವಯ ತಿದ್ದುಪಡಿಗೊಂಡ ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಇನ್ನೂ ಪ್ರಕಟವಾಗದೆ ಇರುವುದರಿಂದ ವ್ಯಕ್ತಿತ್ವ ಪರೀಕ್ಷೆ ನಡೆದಿಲ್ಲ. ಅಲ್ಲದೆ, ನಿಯಮಗಳ ತಿದ್ದುಪಡಿ ಪ್ರಕಾರ ಸಂದರ್ಶನ ಮಂಡಳಿಯನ್ನು ಕೆಪಿಎಸ್‌ಸಿ  ಅಧ್ಯಕ್ಷರು ರಚಿಸಬೇಕು.

ಕೆಪಿಎಸ್‌ಸಿಯಲ್ಲಿ 11 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಖಾಲಿ ಇದೆ.  ಅಧ್ಯಕ್ಷರಾಗಿದ್ದ ಗೋನಾಳ ಭೀಮಪ್ಪ 2013ರ ಮೇ 10ರಂದು ನಿವೃತ್ತಿಯಾಗಿದ್ದರು. ಬಳಿಕ ಆಯೋಗದಲ್ಲಿ ಹಿರಿಯ ಸದಸ್ಯರಾಗಿದ್ದ ಕನಿರಾಂ ಹಂಗಾಮಿ ಅಧ್ಯಕ್ಷರಾಗಿದ್ದರು. ಅವರೂ ಅದೇ ವರ್ಷ ಅಕ್ಟೋಬರ್‌ನಲ್ಲಿ  ನಿವೃತ್ತರಾಗಿದ್ದರು. ಹಿರಿಯ ಸದಸ್ಯರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಿಸಲು ಅವಕಾಶ ಇದೆಯಾದರೂ ಸದ್ಯ ಇರುವ ಹಿರಿಯ ಸದಸ್ಯರು ಕೆಪಿಎಸ್‌ಸಿಯಲ್ಲಿ ಈ ಹಿಂದೆ ನಡೆದ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ.

Facebook Comments

Sri Raghav

Admin