ಬಿಗ್ ನ್ಯೂಸ್ : ದೆಹಲಿಯಲ್ಲಿ ಭೀಕರ ಬೆಂಕಿ ದುರಂತ, 43 ಕಾರ್ಮಿಕರ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.8- ರಾಜಧಾನಿ ದೆಹಲಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಟ 43 ಕಾರ್ಮಿಕರು ಮೃತಪಟ್ಟು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಇಂದು ನಸುಕಿನಲ್ಲಿ ದೆಹಲಿಯ ರಾಣಿ ಜಾನ್ಸಿ ರಸ್ತೆಯಲ್ಲಿರುವ ಅನಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಭಾರೀ ಬೆಂಕಿಯ ಆಕಸ್ಮಿಕ ಸಂಭವಿಸಿತು. ಈ ಭೀಕರ ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ಅನೇಕ ಕಾರ್ಮಿಕರು ಕಾರ್ಖಾನೆಯಲ್ಲಿ ನಿದ್ರಿಸುತ್ತಿದ್ದರು. ಅಗ್ನಿಯ ಕೆನ್ನಾಲಿಗೆ ಅತ್ಯಂತ ಕ್ಷಿಪ್ರವಾಗಿ ವ್ಯಾಪಿಸಿ ಭಾರೀ ಸಾವು-ನೋವು ಸಂಭವಿಸಿತು.

ಬೆಳಗ್ಗೆ 5.22ರಲ್ಲಿ ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ 30 ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾದವು. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಅಗ್ನಿ ಅವಘಡದ ಸ್ವರೂಪ ಗಂಭೀರವಾಗಿದ್ದು, ಕಾರ್ಯಾಚರಣೆಗೆ ಅಡ್ಡಿಯಾಯಿತು. ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಗ್ನಿಶಾಮಕ ದಳದ ಉಪ ಮುಖ್ಯಾಧಿಕಾರಿ ಸುನಿಲ್ ಚೌಧರಿ, 600 ಚದರಡಿ ಸ್ಥಳದಲ್ಲಿ ಅಗ್ನಿ ಅವಘಡ ಉಂಟಾಗಿದೆ.

ಕಾರ್ಖಾನೆ ಒಳಗೆ ತೀವ್ರ ಕತ್ತಲು ಕವಿದಿತ್ತು. ಶಾಲಾ ಬ್ಯಾಗ್‍ಗಳು, ಬಟ್ಟೆಗಳು ಮತ್ತು ಇತರ ಸಾಮಗ್ರಿಗಳು ಇರುವ ಕಾರ್ಖಾನೆಯಾಗಿದ್ದು, ಬೆಂಕಿ ಕ್ಷಿಪ್ರವಾಗಿ ವ್ಯಾಪಿಸಲು ಕಾರಣವಾಯಿತು ಎಂದು ತಿಳಿಸಿದ್ದಾರೆ. ಈ ದುರ್ಘಟನೆಯಲ್ಲಿ ಸಾವು-ನೋವು ಸಂಭವಿಸಿದೆ. ಇದುವರೆಗೆ 50ಕ್ಕೂ ಹೆಚ್ಚು ಮಂದಿಯನ್ನು ಸ್ಥಳದಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದ್ದೇವೆ. ಕೆಲವರು ಗಾಯಗೊಂಡಿದ್ದು ಇನ್ನೂ ಕೆಲವರು ಹೊಗೆಗೆ ಉಸಿರುಗಟ್ಟಿ ತಲೆಸುತ್ತಿ ಬಿದ್ದಿದ್ದಾರೆ.

ಈ ಘಟನೆ ನಡೆಯುವಾಗ ಕಾರ್ಖಾನೆಯೊಳಗೆ ಅನೇಕ ಕಾರ್ಮಿಕರು ನಿದ್ರಿಸುತ್ತಿದ್ದರು ಎಂದು ಕಾರ್ಖಾನೆ ಮಾಲೀಕ ತಿಳಿಸಿದ್ದಾರೆ ಎಂದು ಚೌಧರಿ ಹೇಳಿದರು. ಅನಜ್ ಮಂಡಿ ಪ್ರದೇಶವು ಅತ್ಯಂತ ಕಿರಿದಾದ ಓಣಿಗಳನ್ನು ಒಳಗೊಂಡಿದೆ. ಹೀಗಾಗಿ ಅಗ್ನಿಶಾಮಕ ವಾಹನಗಳು ಆ ಸ್ಥಳ ತಲುಪಲು ಶ್ರಮಿಸಬೇಕಾಯಿತು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಾಧಿಕಾರಿ ಅತುಲ್ ಗರ್ಗ್ ಹೇಳಿದ್ದಾರೆ.

ಬೆಂಕಿಯನ್ನು ಸಂಪೂರ್ಣ ತಹಬಂದಿಗೆ ತರಲಾಗಿದೆ. ಆದರೆ, ಅಗ್ನಿಗಾಹುತಿಯಾದ ಕಟ್ಟಡದ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆ ಇದ್ದು, ಶೋಧಕಾರ್ಯ ಮುಂದುವರಿದಿದೆ.  ಗಾಯಾಳುಗಳನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆ, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮತ್ತು ಇಂದೂರಾವ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕೆಲವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ದೆಹಲಿ ಡಿಸಿಪಿ ಮೋನಿಕಾ ಬಾಟಿಯಾ ತಿಳಿಸಿದ್ದಾರೆ. ಪ್ರಧಾನಿ ದಿಗ್ಭ್ರಮೆ: ದೆಹಲಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವು-ನೋವು ಸಂಭವಿಸಿರುವ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ನೊಂದವರಿಗೆ ಸಾಂತ್ವನ ಹೇಳಿರುವ ಅವರು ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮೃತರು ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದರು.

Facebook Comments

Sri Raghav

Admin