ತುರ್ತು ಪರಿಸ್ಥಿತಿಗೆ 44 ವರ್ಷ : ಸರ್ಕಾರದ ವಿರುದ್ಧ ಪ್ರತಿಭಟಿಸಿದ ಧೈರ್ಯಶಾಲಿಗಳಿಗೆ ಮೋದಿ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.25- ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಾರತದಲ್ಲಿ ಪ್ರಪ್ರಥಮ ಬಾರಿಗೆ ವಿಧಿಸಿದ್ದ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸಕ್ಕೆ ಇಂದು 44 ವರ್ಷ.  ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಈ ಕರಾಳ ತುರ್ತು ಪರಿಸ್ಥಿತಿ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ತುರ್ತು ಪರಿಸ್ಥಿತಿ ವಿರುದ್ಧ ಧ್ವನಿ ಎತ್ತಿ ಹೋರಾಡಿದ ಎಲ್ಲ ನಾಯಕರಿಗೂ ಅವರು ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ತುರ್ತು ಪರಿಸ್ಥಿತಿ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಸರ್ಕಾರದ ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ಆಗ ದಿಟ್ಟತನದಿಂದ ಹೋರಾಡಿದ ಎಲ್ಲ ನಾಯಕರಿಗೂ ನಾವು ನಮಿಸುತ್ತೇವೆ ಎಂದು ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಷಾ ಸಹ ತುರ್ತು ಪರಿಸ್ಥಿತಿ ಸಂದರ್ಭವನ್ನು ಭಾರತದ ದೊಡ್ಡ ಕಪ್ಪುಚುಕ್ಕೆ ಎಂದು ಬಣ್ಣಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ತುರ್ತು ಪರಿಸ್ಥಿತಿಯನ್ನು ಭಾರತ ಇತಿಹಾಸದ ಕರಾಳ ಅಧ್ಯಾಯ ಎಂದು ಹೇಳಿದ್ದಾರೆ. ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡ ಕೂಡ ಆಗಿನ ಇಂದಿರಾಗಾಂಧಿ ಸರ್ಕಾರ ವಿಧಿಸಿದ ತುರ್ತು ಪರಿಸ್ಥಿತಿಯನ್ನು ಅತ್ಯಂತ ಕೆಟ್ಟ ನಿರ್ಧಾರ ಎಂದು ವ್ಯಾಖ್ಯಾನಿಸಿದ್ದಾರೆ.

ದೇಶದಲ್ಲಿ ಆಂತರಿಕ ಕಲಹಗಳ ಕಾರಣಗಳನ್ನೊಡ್ಡಿ ಅಂದು ಪ್ರಧಾನಿ ಗಾಂಧಿಯವರ ಶಿಫಾರಸ್ಸಿನ ಮೇರೆಗೆ ಆಗಿನ ರಾಷ್ಟ್ರಪತಿ ಫಕೃದ್ದೀನ್ ಅಲಿ ಅಹಮ್ಮದ್ ಜೂ.25, 1975ರಂದು ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿ ಜಾರಿಗೊಳಿಸಿದ್ದರು.

ಸುಮಾರು 22 ತಿಂಗಳ ಅವಧಿವರೆಗೆ ಅಂದರೆ 21ನೇ ಮಾರ್ಚ್, 1977ರವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಸೇರಿದಂತೆ ನಾಗರಿಕರ ಎಲ್ಲ ಪೌರ ಹಕ್ಕುಗಳನ್ನು ಮೊಟಕುಗೊಳಿಸಲಾಗಿತ್ತು. ಸರ್ಕಾರದ ವಿರುದ್ಧ ದನಿ ಎತ್ತಿದ್ದ ನಾಯಕರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಸಮಾಜಸುಧಾಕರು, ಪತ್ರಕರ್ತರು, ಲೇಖಕರು ಸೇರಿದಂತೆ ಅನೇಕರನ್ನು ಬಂಧನಕ್ಕೊಳಪಡಿಸಲಾಗಿತ್ತು.

Facebook Comments