ಬೆಳ್ಳಂಬೆಳಗ್ಗೆ 45 ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ, ಹಣ ಹಾಗೂ ಮಾರಕಾಸ್ತ್ರ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.23- ನಗರದಲ್ಲಿ ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ನಾಲ್ವರು ಪ್ರಮುಖ ರೌಡಿಗಳು ಹಾಗೂ ಅವರ ಸಹಚರರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, 2 ಲಕ್ಷ ಹಣ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನಿಲ್, ಜೆ.ಬಿ.ನಾರಾಯಣ ಹಾಗೂ ಅವರ ಸಹಚರರಿಗೆ ಸೇರಿದ 45 ಮನೆಗಳ ಮೇಲೆ ಇಂದು ಮುಂಜಾನೆಯಿಂದಲೇ ದಾಳಿ ನಡೆಸಲಾಗಿದೆ.

ಲಾಕ್‍ಡೌನ್ ತೆರವಾದ ನಂತರ ನಗರದಲ್ಲಿ ಅಪರಾಧ ಪ್ರಕರಣಗಳು ಅಧಿಕವಾಗಿದ್ದು, ಅದನ್ನು ಮಟ್ಟ ಹಾಕಲು ಬೆಂಗಳೂರು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ಹಣ ಹಾಗೂ ಮಾರಕಾಸ್ತ್ರಗಳು ಪತ್ತೆಯಾಗಿವೆ.

ಕಳೆದ ಐದು ದಿನಗಳ ಹಿಂದೆ ಕೋರಮಂಗಲ 8ನೆ ಬ್ಲಾಕ್‍ನಲ್ಲಿರುವ ಯೂನಿಯನ್ ಬ್ಯಾಂಕ್ (ಕಾಪೆರ್ರೇಷನ್)ಗೆ ಬಂದಿದ್ದ ರೌಡಿ ಶೀಟರ್ ಬಬ್ಲಿಯನ್ನು ಹಾಡಹಗಲೇ ಪತ್ನಿ, ಮಗಳ ಎದುರೇ ಭೀಕರವಾಗಿ ಕೊಲೆ ಮಾಡಲಾಗಿತ್ತು. ಇದಕ್ಕೂ ಮೊದಲು ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್, ಬನಶಂಕರಿ ಮುಖ್ಯರಸ್ತೆಯಲ್ಲಿ ಫೈನಾಷಿಯರ್‍ನನ್ನು ಹಾಡುಹಗಲೇ ಹತ್ಯೆ ಮಾಡಲಾಗಿತ್ತು.

ಜೈಲಿನಲ್ಲಿದ್ದುಕೊಂಡೇ ಕೆಲವರು ದುಷ್ಕøತ್ಯಗಳಿಗೆ ಸಂಚು ರೂಪಿಸುತ್ತಿದ್ದು, ಜೈಲಿನ ಹೊರಗಿರುವ ರೌಡಿಶೀಟರ್‍ಗಳು ಅದಕ್ಕೆ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪಗಳಿವೆ. ಹಾಗಾಗಿ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಪಣ ತೊಟ್ಟಿರುವ ಬೆಂಗಳೂರು ಪೊಲೀಸರು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗುತ್ತಿದೆ. ಇತ್ತೀಚೆಗೆ ಕೂಡ ಇದೇ ರೀತಿಯ ದಾಳಿ ನಡೆದಿತ್ತು.

ಮುಂದುವರೆದ ಭಾಗವಾಗಿ ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಲಾಗಿದೆ. ನಗರ ಪೊಲೀಸ್ ಆಯುಕ್ತರು ಆಯಾ ಠಾಣಾ ಇನ್‍ಸ್ಪೆಕ್ಟರ್‍ಗಳಿಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ಖಡಕ್ ಸೂಚನೆ ನೀಡಿದ್ದಾರೆ. ಅದರಂತೆ ಇಂದು ಸಿಸಿಬಿ ಪೊಲೀಸರು ಅಖಾಡಕ್ಕಿಳಿದು ಅಪರಾಧ ಹಿನ್ನೆಲೆಯುಳ್ಳವರಿಗೆ ಬಿಸಿ ಮುಟ್ಟಿಸಿದ್ದಾರೆ.

ಮನೆಗಳ ಪರಿಶೀಲನೆ ಸಂದರ್ಭದಲ್ಲಿ ರೌಡಿಗಳು ಪ್ರಸ್ತುತ ಮಾಡುತ್ತಿರುವ ವೃತ್ತಿ, ಕೆಲಸ ಮಾಡುವ ಸ್ಥಳದ ವಿವರ, ಖಾಯಂ ವಿಳಾಸ, ಸಹಚರರ ಬಗ್ಗೆ ಮಾಹಿತಿ ಹೀಗೆ ಹಲವು ವಿಷಯಗಳನ್ನು ಸಂಗ್ರಹಿಸಿದರು. ನಗರದಲ್ಲಿ ಪುಡಾರಿಗಳನ್ನು ಹದ್ದುಬಸ್ತಿನಲ್ಲಿಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಟ್ಟಾರೆ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಗರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಬಾಲ ಬಿಚ್ಚದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Facebook Comments