ಇಟಲಿಯಲ್ಲಿ ಒಂದೇ ದಿನ 475 ಬಲಿ, ಮಹಾಮಾರಿಗೆ ವಿಶ್ವವ್ಯಾಪಿ 8,969 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಮಾ.19- ಯಮಸ್ವರೂಪಿ ಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ವಿಶ್ವದಲ್ಲಿ ಈವರೆಗೆ ಸುಮಾರು 8,969 ಮಂದಿ ಈ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕು ಪೀಡಿತರ ಸಂಖ್ಯೆ 2.19 ಲಕ್ಷಕ್ಕೇರಿದೆ. ಕೊರೊನಾ ಬಾಧೆಯಿಂದ ತತ್ತರಿಸಿರುವ ಇಟಲಿಯಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಮತ್ತೆ 475 ಮಂದಿ ಬಲಿಯಾಗಿದ್ದು, ಸತ್ತವರ ಸಂಖ್ಯೆ 2,900ಕ್ಕೇರಿದೆ. ಅಲ್ಲದೆ, ಸುಮಾರು 30,000 ಮಂದಿಗೆ ಸೋಂಕು ತಗುಲಿದ್ದು, ಕಳವಳಕಾರಿಯಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ವಿಶ್ವದ 160ಕ್ಕೂ ಹೆಚ್ಚು ದೇಶಗಳಲ್ಲಿ ಈವರೆಗೆ ಕೋವಿಡ್-19ಗೆ 8,969 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 2,19,345 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.  ಸಮಾಧಾನಕರ ಸಂಗತಿ ಎಂದರೆ ರೋಗ ಪೀಡತರಾಗಿದ್ದ 95,745 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಇವರಲ್ಲಿ ಅನೇಕರು ಪೂರ್ಣ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ 100ಕ್ಕೇರಿದ್ದು, ದೇಶದ ಎಲ್ಲ 50 ರಾಜ್ಯಗಳಿಗೂ ವ್ಯಾಪಿಸಿದ್ದು, ಈ ಪ್ರಾಂತ್ಯಗಳಲ್ಲಿ ಹೊಸ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇರಾನ್ ಮತ್ತು ಸ್ಪೇನ್‍ನಲ್ಲೂ ಈ ಹೆಮ್ಮಾರಿಯ ಅಟ್ಟಹಾಸಕ್ಕೆ ಮತ್ತೆ ಸಾವು ನೋವಿನ ವರದಿಗಳಿವೆ.  ಪಾಕಿಸ್ತಾನದಲ್ಲಿ ಕೋವಿಡ್-19 ಸೋಂಕಿಗೆ ಇಬ್ಬರು ಮೃತಪಟ್ಟು, 300ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾರಣಿಸಿಕೊಂಡಿದೆ.

ಜಗತ್ತಿನ 160ಕ್ಕೂ ಹೆಚ್ಚು ದೇಶಗಳಲ್ಲಿ ಈ ಹೊಸ ವೈರಾಣು ಸೋಂಕಿನಿಂದ ಲಕ್ಷಾಂತರ ಮಂದಿ ಬಾಧಿತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಆತಂಕ ವ್ಯಕ್ತಪಡಿಸಿದೆ.  ಕೋವಿಡ್-19 ಸೋಂಕು ಇನ್ನೂ ಕೆಲವು ದೇಶಗಳಿಗೂ ಹಬ್ಬುತ್ತಿದ್ದು, ಜನರು ಮತ್ತಷ್ಟು ಭಯಭೀತರಾಗಿದ್ದಾರೆ.

Facebook Comments