5 ಮುಖ್ಯಮಂತ್ರಿಗಳನ್ನು ಕೊಟ್ಟ ಕೀರ್ತಿ ರೇಷ್ಮೆ ನಾಡಿನದ್ದು

ಈ ಸುದ್ದಿಯನ್ನು ಶೇರ್ ಮಾಡಿ

Ramanagar--01

ರಾಜ್ಯಕ್ಕೆ ಐದು ಮಂದಿ ಮುಖ್ಯಮಂತ್ರಿ ಗಳನ್ನು ನೀಡಿದ ಕೀರ್ತಿಗೆ ರೇಷ್ಮೆ ನಾಡು ರಾಮನಗರ ಜಿಲ್ಲೆ ಭಾಜನವಾಗಲಿದೆ. ಬುಧವಾರ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಇವರು ರಾಮನಗರ ಜಿಲ್ಲೆಯ ಐದನೆ ಮುಖ್ಯಮಂತ್ರಿ ಆಗಲಿದ್ದಾರೆ. ಇದೇ ಮೊದಲ ಬಾರಿಗೆ ಗೊಂಬೆಗಳ ನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮೊದಲ ಮುಖ್ಯಮಂತ್ರಿ ಕೂಡ ಆಗಿದ್ದಾರೆ. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಈ ಜಿಲ್ಲೆಯ ಮೊದಲ ಮುಖ್ಯಮಂತ್ರಿಯಾದರೆ, ಎಚ್.ಡಿ.ಕುಮಾರಸ್ವಾಮಿ ಐದನೆ ಮುಖ್ಯಮಂತ್ರಿ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ , ಇಬ್ಬರು ಮುಖ್ಯಮಂತ್ರಿಗಳು ಇದೇ ಜಿಲ್ಲೆಯಿಂದ ಆದಂತಾಗಲಿದೆ. ಅದರಲ್ಲೂ ಎಚ್.ಡಿ.ಕುಮಾರಸ್ವಾಮಿ ಎರಡನೆ ಬಾರಿ ಇದೇ ಜಿಲ್ಲೆಯಿಂದ ಮುಖ್ಯ ಮಂತ್ರಿಯಾಗುತ್ತಿದ್ದಾರೆ.

ಆದರೆ, ಇದುವರೆಗೂ ನಾಲ್ವರು ಮುಖ್ಯಮಂತ್ರಿಗಳ್ಯಾರೂ ಕೂಡ ಐದು ವರ್ಷ ಪೂರ್ಣಾವಧಿ ಆಡಳಿತ ನಡೆಸಿಲ್ಲ.  ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಕೆಂಗಲ್ ಹನುಮಂತಯ್ಯ ಉತ್ತಮ ಆಡಳಿತ ನಡೆಸಿ ಸುಂದರವಾದ ಹಾಗೂ ರಾಷ್ಟ್ರದ ಗಮನ ಸೆಳೆಯುವಂತಹ ವಿಧಾನಸೌಧವನ್ನು ನಿರ್ಮಿಸಿದರು.1983ರಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಕನಕಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು. ಇವರು ರಾಮನಗರ ಜಿಲ್ಲೆಯ ಎರಡನೆ ಮುಖ್ಯಮಂತ್ರಿ ಎನಿಸಿಕೊಂಡರು.

1994ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾಗಿ ಮುಖ್ಯಮಂತ್ರಿಯಾದರು, ನಂತರ ರಾಷ್ಟ್ರದ ಪ್ರಧಾನಮಂತ್ರಿಯಾದರು. ಇವರು ರಾಮನಗರ ಕ್ಷೇತ್ರದ ಎರಡನೆ ಹಾಗೂ ರಾಮನಗರ ಜಿಲ್ಲೆಯ ಮೂರನೆ ಮುಖ್ಯಮಂತ್ರಿ ಎನಿಸಿಕೊಂಡರು. ಕಳೆದ 2004ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಶಾಸಕರಾದರು. 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ 20 ತಿಂಗಳ ಕಾಲ ಆಡಳಿತ ನಡೆಸಿ ಜನಮನ್ನಣೆ ಗಳಿಸಿದರು.

ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದೆ ಮತ್ತೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಈ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಆಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ನಾಲ್ಕು ಹಾಗೂ ಐದನೆ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಆಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು. ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ.

ರಾಜ್ಯದ ಇದುವರೆಗಿನ 25 ಮುಖ್ಯಮಂತ್ರಿ ಗಳ ಪೈಕಿ ಐದು ಮುಖ್ಯಮಂತ್ರಿಗಳನ್ನು ಕೊಟ್ಟ ಕೀರ್ತಿ ರಾಮನಗರ ಜಿಲ್ಲೆಗೆ ಸಲ್ಲುತ್ತದೆ. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟ ಹೆಗ್ಗಳಿಕೆಯೂ ಈ ಜಿಲ್ಲೆಗೆ ಸಲ್ಲುತ್ತದೆ.  ಈ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಯಾಗಿ ಕುಮಾರಸ್ವಾಮಿ ಐದು ವರ್ಷಗಳ ಕಾಲ ಪೂರ್ಣಾಡಳಿತ ನಡೆಸುವರೇ ಎಂಬುದನ್ನು ಕಾದು ನೋಡಬೇಕಿದೆ.

ರಾಮನಗರ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ಮುಖ್ಯಮಂತ್ರಿಗಳು ಪ್ರತಿನಿಧಿಸಿದ್ದಾರೆ. ಆದರೆ, ನಾಡಪ್ರಭು ಕೆಂಪೇಗೌಡರು ಆಳಿದ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಒಬ್ಬರೂ ಕೂಡ ಮುಖ್ಯಮಂತ್ರಿಯಾಗಿಲ್ಲ. ರಾಮನಗರ, ಕನಕಪುರ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಚುನಾಯಿತರಾದವರು ಮುಖ್ಯಮಂತ್ರಿಗಳಾಗಿದ್ದಾರೆ. ಈಗಿನ ರಾಮನಗರ ಜಿಲ್ಲೆ ಮೊದಲು ಬೆಂಗಳೂರು ಜಿಲ್ಲೆಯಲ್ಲೇ ಸೇರಿತ್ತು. ಆಗ ಕೆಂಗಲ್ ಹನುಮಂತಯ್ಯ ಮೊದಲ ಮುಖ್ಯಮಂತ್ರಿಯಾಗಿದ್ದರೆ, ರಾಮಕೃಷ್ಣ ಹೆಗಡೆ ಎರಡನೆ ಮುಖ್ಯಮಂತ್ರಿಯಾಗಿದ್ದರು.

1986ರಲ್ಲಿ ಬೆಂಗಳೂರು ಜಿಲ್ಲೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಎಂದು ವಿಂಗಡಣೆಯಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ತಾಲೂಕುಗಳು ಸೇರ್ಪಡೆಯಾಗಿದ್ದವು. ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಿದ್ದ ರಾಮನಗರ ವಿಧಾನಸಭಾ ಕ್ಷೇತ್ರದಿಂದಲೇ ಚುನಾಯಿತರಾಗಿ ಮುಖ್ಯಮಂತ್ರಿ ಯಾಗಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ರಾಮನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತಂದರು. ರಾಮನಗರ ಉಪವಿಭಾಗ ವ್ಯಾಪ್ತಿಗೆ ಒಳಪಟ್ಟಿದ್ದ ರಾಮನಗರ, ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕು ಗಳನ್ನು ಒಳಗೊಂಡ ರಾಮನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿತು. ರಾಮನಗರ ಜಿಲ್ಲೆಯಾದ ನಂತರ ಮೊದಲ ಮುಖ್ಯಮಂತ್ರಿ ಕುಮಾರಸ್ವಾಮಿ ಯಾಗಿದ್ದಾರೆ.

Facebook Comments

Sri Raghav

Admin