5 ರಾಜ್ಯಗಳಲ್ಲಿ ಜಲಪ್ರಳಯ : 100ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

100-Dead

ನವದೆಹಲಿ, ಆ.20-ಭಾರತದ ಐದು ರಾಜ್ಯಗಳಲ್ಲಿ ಭಾರೀ ಮಳೆ ಮತ್ತು ಭೀಕರ ಪ್ರವಾಹದ ಆರ್ಭಟಕ್ಕೆ ಕನಿಷ್ಠ 100ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಲೆಕ್ಕವಿಲ್ಲದಷ್ಟು ಜನ ಗಾಯಗೊಂಡಿದ್ದಾರೆ. ಉತ್ತರಪ್ರದೇಶ, ಮಧ್ಯಪ್ರದೇಶ, ಉತ್ತರಖಂಡ್, ರಾಜಸ್ತಾನ ಮತ್ತು ಅಸ್ಸಾಂ ರಾಜ್ಯಗಳ ವಿವಿಧೆಡೆ ನೆರೆ ಹಾವಳಿಯಿಂದ ಹಲವಾರು ಪ್ರದೇಶಗಳು ಮತ್ತು ಗ್ರಾಮಗಳು ಜಲಾವೃತವಾಗಿದ್ದು, ಸಾವಿರಾರು ಜನ ಸಂತ್ರಸ್ಥರಾಗಿದ್ದಾರೆ. ಜಲಪ್ರಳಯದಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು ಸಾವು-ನೋವು ಇನ್ನಷ್ಟು ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.
ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ನೆರೆ ಹಾವಳಿಯಿಂದ ಸತ್ತವರ ಸಂಖ್ಯೆ 82ಕ್ಕೆ ಏರಿದೆ. ನಿನ್ನೆ ಮತ್ತು ಇಂದು 19 ಮೃತದೇಹಗಳು ಪತ್ತೆಯಾಗಿವೆ. ಅಲಹಾಬಾದ್ ಮತ್ತು ವಾರಣಾಸಿಯಲ್ಲಿ ಗಂಗಾ ನಂದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಭಾರೀ ಅನಾಹುತ ಮತ್ತು ಹಾನಿ ಸಂಭವಿಸಿದೆ.

ಪ್ರವಾಹದಿಂದ ಅನೇಕ ನದಿ ಮತ್ತು ಉಪನದಿಗಳೂ ಬೋರ್ಗರೆಯುತ್ತಿವೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಭಾಗಶಃ ಮುಳುಗಡೆಯಾಗಿದೆ. ಇದರಿಂದಾಗಿ ಸಹಸ್ರಾರು ಮಂದಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅನೇಕ ಪ್ರದೇಶಗಳು ಜಲಾವೃತವಾಗಿರುವುದರಿಂದ ಸೋಂಕು ರೋಗಗಳು ಹರಡುವ ಭೀತಿ ಮತ್ತಷ್ಟು ಆತಂಕ ಮೂಡಿಸಿದೆ.  ಗಂಗಾನದಿಯ ರೌದ್ರಾವತಾರದಿಂದ ಕೆಲವು ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸೇನೆ ಸಿಬ್ಬಂದಿಗೆ ಅಡ್ಡಿಯಾಗಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರಹತ್ಘಾಟ್ನಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಇಂದು ಬೆಳಿಗ್ಗೆ ಮನೆಯೊಂದು ಕುಸಿದು ಏಳು ಮಂದಿ ಮೃತಪಟ್ಟು, ಇತರ ಮೂವರು ತೀವ್ರ ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ವರುಣನ ರುದ್ರನರ್ತನದಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಮುಂಜಾನೆ ಪ್ರವಾಹದ ನೀರು ಮನೆಗಳಿಗೆ ನುಗ್ಗಿತು. ಮನೆಯೊಂದು ಕುಸಿದು ಬಿದ್ದು, ಮಲಗಿದ್ದ ಒಂದೇ ಕುಟುಂಬದ ಏಳು ಮಂದಿ ಮೃತರಾದರು.  ಮಧ್ಯಪ್ರದೇಶದ ರೇವಾ ಮತ್ತು ಸಾತ್ನ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಸುಮಾರು 80 ಗ್ರಾಮಗಳು ಮುಳುಗಡೆಯಾಗಿದ್ದು, 25 ಸಾವಿರ ಮಂದಿ ಸಂತ್ರಸ್ತರಾಗಿದ್ದಾರೆ. ಭಾರೀ ಮಳೆ ಮತ್ತು ಪ್ರವಾಹ ಕಡಿಮೆಯಾಗುವ ತನಕ ಈ ಎರಡು ಜಿಲ್ಲೆಗಳ ಕೆಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಭಾರತೀಯ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಉತ್ತರಖಂಡ್, ರಾಜಸ್ತಾನ ಮತ್ತು ಅಸ್ಸಾಂ ರಾಜ್ಯಗಳ ವಿವಿಧೆಡೆ ಮಳೆ ಮತ್ತು ನೆರೆ ಹಾವಳಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಕನಿಷ್ಠ 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಈ ಮೂರು ರಾಜ್ಯಗಳ ಕೆಲವೆಡೆ ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ನೂರಾರು ಮಂದಿ ನಿರಾಶ್ರಿತರಾಗಿದ್ದು, ಅವರಿಗೆ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ. ಸಾವು-ನೋವು ಇನ್ನಷ್ಟು ಹೆಚ್ಚಾಗುವ ಆತಂಕವಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin